ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯವೈಖರಿ ಮತ್ತು ಅವರ ಇತ್ತೀಚಿನ ಸರಣಿ ಸಭೆಗಳ ಕುರಿತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಅಮಿತ್ ಶಾ ಯಾವುದೇ ಉದ್ದೇಶವಿಲ್ಲದೆ ಸಭೆ ನಡೆಸುವ ವ್ಯಕ್ತಿಯಲ್ಲ, ಅವರು ಸಭೆ ಕರೆದಿದ್ದಾರೆ ಎಂದರೆ ಅದರ ಹಿಂದೆ ಒಂದು ಬೃಹತ್ ಯೋಜನೆ ಸಿದ್ಧವಾಗುತ್ತಿದೆ ಎಂದೇ ಅರ್ಥ ಎಂದು ಓವೈಸಿ ಎಚ್ಚರಿಸಿದ್ದಾರೆ.
ಅಮಿತ್ ಶಾ ಅವರ ರಾಜಕೀಯ ನಡೆಯನ್ನು ನಾನು ಕಳೆದ 12 ವರ್ಷಗಳಿಂದ ಹತ್ತಿರದಿಂದ ಗಮನಿಸುತ್ತಿದ್ದೇನೆ. ಅವರು ಕಾಟಾಚಾರಕ್ಕೆ ಸಭೆ ನಡೆಸಿ ಸಮಯ ವ್ಯರ್ಥ ಮಾಡುವವರಲ್ಲ. ಅವರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನೂ ಮಾಡುವುದಿಲ್ಲ. ಅವರ ಪ್ರತಿಯೊಂದು ಸಭೆಯೂ ಪಕ್ಕಾ ಪ್ಲ್ಯಾನ್ ನೊಂದಿಗೆ ಕೂಡಿರುತ್ತದೆ. ನನ್ನ ಊಹೆಯ ಪ್ರಕಾರ, ಕೇಂದ್ರ ಸರ್ಕಾರವು ದೇಶಾದ್ಯಂತ ಎನ್ಆರ್ ಸಿ ಅಥವಾ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೊಳಿಸಲು ಗುಪ್ತವಾಗಿ ತಯಾರಿ ನಡೆಸುತ್ತಿದೆ ಎಂದು ಓವೈಸಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಗೃಹ ಇಲಾಖೆಯು ಇತ್ತೀಚೆಗೆ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವೊಂದನ್ನು ರಚಿಸಿದೆ. ಭೌಗೋಳಿಕವಾಗಿ ಬದಲಾವಣೆಯಾಗಿರುವ ಪ್ರದೇಶಗಳ ಮೇಲೆ ವಿಶೇಷ ನಿಗಾ ವಹಿಸಲು ಸೂಚಿಸಲಾಗಿದೆ. ಅಷ್ಟೇ ಅಲ್ಲದೆ, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಡಿಲೀಟ್ ಆಗಿರುವ ಸುಮಾರು ಐದರಿಂದ ಆರು ಕೋಟಿ ಜನರ ಹೆಸರನ್ನು ಮರುಪರಿಶೀಲಿಸಲು ಆದೇಶಿಸಲಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಏನೋ ದೊಡ್ಡದು ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಒಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಓವೈಸಿಯವರನ್ನು ಬಿಜೆಪಿಯ ಬಿ ಟೀಂ ಎಂದು ಟೀಕಿಸುತ್ತಿದ್ದರೆ, ಇನ್ನೊಂದೆಡೆ ಅಮಿತ್ ಶಾ ಅವರು ಸದನದಲ್ಲಿ ಓವೈಸಿಯವರ ಕಾರ್ಯವನ್ನು ಶ್ಲಾಘಿಸಿದ್ದರು. ಈ ರಾಜಕೀಯ ಬೆಳವಣಿಗೆಗಳ ನಡುವೆಯೇ ಜುಲೈ 21 ರಿಂದ ಆರಂಭವಾಗಲಿರುವ ಲೋಕಸಭೆಯ ಮಾನ್ಸೂನ್ ಅಧಿವೇಶನವು ಅತ್ಯಂತ ಮಹತ್ವ ಪಡೆದುಕೊಂಡಿದೆ. ಶಿವಸೇನೆ, ತೃಣಮೂಲ ಕಾಂಗ್ರೆಸ್ ಮತ್ತು ಎಎಪಿಯ ಕೆಲವು ಸಂಸದರ ಬೆಂಬಲದೊಂದಿಗೆ ಸಂಖ್ಯಾಬಲ ಹೆಚ್ಚಿಸಿಕೊಂಡಿರುವ ಎನ್ ಡಿಎ ಸರ್ಕಾರ, ಅಧಿವೇಶನದಲ್ಲಿ ಯಾವ ಹೊಸ ಮಸೂದೆಯನ್ನು ಮಂಡಿಸಲಿದೆ ಎಂಬುದು ಈಗ ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.








