ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.
ಕಾಂಗ್ರೆಸ್ ಸಂಸದ ಪವನ್ ಖೇರಾ ಮಾಧ್ಯಮಗಳೊಂದಿಗೆ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ಪೊಲೀಸರು ಕ್ರೂರವಾಗಿ ಲಾಠಿ ಪ್ರಹಾರ ನಡೆಸಿದ ನಂತರ ಇಂತಹ ವಿಚಾರದ ಬಗ್ಗೆ ಸಾಮಾನ್ಯ ಚರ್ಚೆ ನಡೆಸಲು ಸಾಧ್ಯವಿಲ್ಲ. ಮೊದಲು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಅದರ ಬಳಿಕವೇ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ನೀಟ್ ಪರೀಕ್ಷೆ ಸಂಬಂಧ ಸರ್ಕಾರದ ನಡೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರವನ್ನು ಸಂಸತ್ನಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲು ಸಜ್ಜಾಗಿವೆ.








