ಬೆಂಗಳೂರು: ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರ ನಡೆ ಮತ್ತು ಈ ವೇಳೆ ನಡೆದ ಗಲಾಟೆ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಟ್ಟೆ ಎಸೆತದ ಘಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಚೇರಿಯಲ್ಲಿ ಬಾಂಬ್ ಇದೆ ಎಂದು ಹೇಳಿಕೆ ನೀಡಿದ ಆರ್ ಅಶೋಕ್ ಅವರ ವಿರುದ್ಧ ಹರಿಪ್ರಸಾದ್ ವ್ಯಂಗ್ಯಭರಿತ ವಾಗ್ದಾಳಿ ನಡೆಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊಟ್ಟೆ ನೋಡಿ ಬಾಂಬ್ ಎನ್ನುವವರನ್ನು ಮೆಚ್ಚಲೇಬೇಕು. ಕಾಂಗ್ರೆಸ್ ಕಚೇರಿಯಲ್ಲಿ ಲಾಂಗು, ಮಚ್ಚು ಹಾಗೂ ಬಾಂಬ್ ಇವೆ ಎಂಬ ಅಶೋಕ್ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ. ಕೇಂದ್ರದಲ್ಲಿ ಅವರದೇ ಸರ್ಕಾರ ಇದೆ, ಅವರಿಗೆ ಅಂತಹ ಅನುಮಾನಗಳಿದ್ದರೆ ಕೂಡಲೇ ತನಿಖೆ ಮಾಡಿಸಲಿ. ಅಷ್ಟಕ್ಕೂ ಪಾಕಿಸ್ತಾನದಿಂದ ಬಂದ ಆರ್‌ಡಿಎಕ್ಸ್ ದೇಶದೊಳಗೆ ಎಲ್ಲಿಂದ ಬಂತು ಎಂಬುದಕ್ಕೆ ಬಿಜೆಪಿ ಮೊದಲು ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ಕೆಪಿಸಿಸಿ ಕಚೇರಿ ಮುತ್ತಿಗೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ದಬ್ಬಾಳಿಕೆ ನಡೆಸಲು ಮುಂದಾಗಿದ್ದಾರೆ. ಬಿಜೆಪಿ ಶಾಸಕ ಬಿ ಪಿ ಹರೀಶ್ ಅವರೇ ನೇರವಾಗಿ ಕಾಂಗ್ರೆಸ್ ಕಚೇರಿಯತ್ತ ಬಂದಿದ್ದರಿಂದ ಕಾರ್ಯಕರ್ತರು ಸಹಜವಾಗಿ ಪ್ರತಿಭಟಿಸಿದ್ದಾರೆ. ನಮ್ಮ ಕಾರ್ಯಕರ್ತರು ಮೊಟ್ಟೆ ಎಸೆದಿಲ್ಲ, ಬಹುಶಃ ಬಿಜೆಪಿ ಕಾರ್ಯಕರ್ತರೇ ತಮ್ಮ ಮೇಲೆ ಮೊಟ್ಟೆ ಎಸೆದುಕೊಂಡಿರಬಹುದು ಅಥವಾ ಅವರೇ ಮೊದಲು ಪ್ರಚೋದನೆ ನೀಡಿರಬಹುದು ಎಂದು ಸ್ಪಷ್ಟಪಡಿಸಿದರು.
ನಮ್ಮ ಕಾರ್ಯಕರ್ತರಿಗೆ ಕೆಪಿಸಿಸಿ ಕಚೇರಿ ಎಂಬುದು ಒಂದು ದೇವಾಲಯವಿದ್ದಂತೆ. ಅಂತಹ ಪವಿತ್ರ ಜಾಗದ ಮೇಲೆ ದಾಳಿ ಮಾಡಲು ಬಂದರೆ ನಮ್ಮವರು ಸುಮ್ಮನೆ ಕೂರುವುದಿಲ್ಲ. ಪಕ್ಷದ ಅಸ್ತಿತ್ವ ಮತ್ತು ಕಚೇರಿಯ ರಕ್ಷಣೆಗಾಗಿ ಪ್ರಾಣ ಕೊಡಲೂ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಬಿಜೆಪಿ ನಾಯಕರು ದೇಶಾದ್ಯಂತ ಹಿಂಸೆಯನ್ನು ಪ್ರಚೋದಿಸಿ, ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಶ್ಯಾಡೋ ಪ್ರಧಾನಮಂತ್ರಿ ಎಂದು ಕರೆಯಲಾಗುತ್ತದೆ. ಅಂತಹ ಉನ್ನತ ಸ್ಥಾನದಲ್ಲಿರುವವರ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮೊಟ್ಟೆ ಎಸೆದವರು ಯಾರು ಎಂಬ ಬಗ್ಗೆ ಬಿಜೆಪಿ ನಾಯಕರು ಉತ್ತರಿಸಲಿ ಎಂದು ಕಿಡಿಕಾರಿದರು. ರಾಜಕೀಯ ಲಾಭಕ್ಕಾಗಿ ಇಂತಹ ಸಣ್ಣತನದ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.








