ಬೆಂಗಳೂರು: ನೀಟ್ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಕೇವಲ ಅಲ್ಪ ಜಯ ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್, ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೂ ಆಗ್ರಹಿಸಿ ಗುಡುಗಿದ್ದಾರೆ. ಕೇವಲ ಒಬ್ಬ ಸಚಿವರ ಬಲಿದಾನದಿಂದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವುದಿಲ್ಲ, ಇಡೀ ವ್ಯವಸ್ಥೆಯೇ ಹೊಣೆ ಹೊರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ ಕೆ ಹರಿಪ್ರಸಾದ್, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಾಗ ನಾಲ್ಕೈದು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಅದರಲ್ಲಿ ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ನಾಗ್ಪುರ ವಿವಿ ಪ್ರೊಫೆಸರ್‌ಗಳನ್ನು ತುಂಬಿದ್ದೇ ಇವರ ಸಾಧನೆಯೇ? ಪ್ರಧಾನ್ ಸಚಿವರಾದ ಮೇಲೆ ಇಡೀ ಶಿಕ್ಷಣ ಕ್ಷೇತ್ರ ಭ್ರಷ್ಟಾಚಾರದ ಕೂಪವಾಯಿತು. ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅಂತಹವರು ಅಲಂಕರಿಸಿದ್ದ ಈ ಸ್ಥಾನಕ್ಕೆ ಪ್ರಧಾನ್ ಬಂದಿದ್ದು ದೇಶದ ಮಹಾದುರಂತ ಎಂದು ಲೇವಡಿ ಮಾಡಿದರು.
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದಮನ ಮಾಡಲು ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ ಹರಿಪ್ರಸಾದ್, ಹೋರಾಟದ ವೇಳೆ ಒಬ್ಬ ವಿದ್ಯಾರ್ಥಿ ಕಣ್ಣು ಕಳೆದುಕೊಂಡಿದ್ದಾನೆ. ಹೆಣ್ಣು ಮಕ್ಕಳ ಬಟ್ಟೆ ಹರಿದು ಅವಮಾನಿಸಲಾಗಿದೆ. ಈ ಹಿಂಸಾಚಾರಕ್ಕೆ ಗೃಹ ಸಚಿವ ಅಮಿತ್ ಶಾ ನೇರ ಹೊಣೆ. ಕೇವಲ ಶಿಕ್ಷಣ ಸಚಿವರು ಹೋದರೆ ಸಾಲದು, ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿಸಿದ ಅಮಿತ್ ಶಾ ಕೂಡ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಸಂಚು ರೂಪಿಸಿತ್ತು ಎಂದು ಗಂಭೀರ ಆರೋಪ ಮಾಡಿದ ಅವರು, ನಾಗ್ಪುರದಿಂದ ಬಂದಿದ್ದ ಸುಮಾರು 400 ಕ್ರಿಮಿನಲ್‌ಗಳು ಪೊಲೀಸ್ ಸಮವಸ್ತ್ರ ಧರಿಸಿ ಪ್ರತಿಭಟನಾ ನಿರತ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಆಂದೋಲನವನ್ನು ದಾರಿ ತಪ್ಪಿಸಲು ಗೂಂಡಾಗಳನ್ನು ಬಳಸಿಕೊಳ್ಳಲಾಗಿದೆ. ಪ್ರಧಾನಿ ಮೋದಿ ನಿವಾಸದ ಮುಂದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಹೆದರಿ ಇಂದು ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಮರ್ ಖಾಲಿದ್ ಪೋಸ್ಟರ್ ಪ್ರದರ್ಶನದ ಕುರಿತು ಉಂಟಾದ ವಿವಾದಕ್ಕೆ ಉತ್ತರಿಸಿದ ಹರಿಪ್ರಸಾದ್, ಉಮರ್ ಖಾಲಿದ್ ಅವರನ್ನು ಐದು ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿರುವುದು ಸರಿಯೇ? ಅವರ ಮೇಲೆ ಚಾರ್ಜ್ ಶೀಟ್ ಏಕೆ ಹಾಕಿಲ್ಲ? ಈ ಸರ್ಕಾರ ಪಾಕಿಸ್ತಾನದ ಮಾದರಿಯನ್ನು ಅನುಸರಿಸುತ್ತಿದೆ. ಪ್ರಶ್ನೆ ಕೇಳುವವರನ್ನು ಜೈಲಿಗಟ್ಟುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದರು.
ಇತ್ತ ದೆಹಲಿಯ ಜಂತರ್ ಮಂತರ್‌ನಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಮಾತನಾಡಿ, ಇದು ದೇಶದ ಯುವಶಕ್ತಿಯ ಗೆಲುವು. ನಾವು ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, ಇನ್ನುಳಿದ ಬೇಡಿಕೆಗಳ ಈಡೇರುವವರೆಗೂ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಯು ಕೇಂದ್ರದ ಪಾಲಿಗೆ ದೊಡ್ಡ ಹಿನ್ನಡೆಯಾಗಿದ್ದರೆ, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳಿಗೆ ಹೊಸ ಆಯುಧ ನೀಡಿದಂತಾಗಿದೆ. ಅಮಿತ್ ಶಾ ರಾಜೀನಾಮೆಗೆ ಕೇಳಿಬಂದಿರುವ ಆಗ್ರಹ ಮುಂದಿನ ದಿನಗಳಲ್ಲಿ ಹೊಸ ರಾಜಕೀಯ ತಿರುವಿಗೆ ಕಾರಣವಾಗುವ ಸಾಧ್ಯತೆಯಿದೆ.








