ನವದೆಹಲಿ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿ ತೆರಳಿದ ನಂತರ, ಆ ವೇದಿಕೆಯನ್ನು ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳ ನಾಯಕರು ಗಂಗಾಜಲದಿಂದ ಶುದ್ಧೀಕರಣ ಮಾಡಿರುವ ಅಮಾನವೀಯ ಘಟನೆ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಘಟನೆಯನ್ನು ದಲಿತ ಸಮುದಾಯಕ್ಕೆ ಹಾಗೂ ತಮಗೆ ಆದ ಘೋರ ಅವಮಾನ ಎಂದು ಕರೆದಿರುವ ಖರ್ಗೆ, ಸಂಸತ್ತಿನ ಅಧಿವೇಶನದಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಂಸತ್ತಿನ ರಾಜ್ಯಸಭೆಯಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಖರ್ಗೆ ಅವರು ಅತ್ಯಂತ ಭಾವುಕರಾಗಿ ಮಾತನಾಡಿದರು. ನಾನು ದಲಿತ ಸಮುದಾಯಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ ಬಿಜೆಪಿ ಬೆಂಬಲಿತ ಸಂಘಟನೆಗಳ ಕಾರ್ಯಕರ್ತರು ನಾನು ಭಾಷಣ ಮಾಡಿದ ವೇದಿಕೆಯನ್ನು ಗಂಗಾಜಲ ತಳಿಚಿ ಶುದ್ಧೀಕರಣ ಮಾಡಿದ್ದಾರೆ. ದಶಕಗಳಿಂದ ಸಂಸದನಾಗಿ, ಸಚಿವನಾಗಿ ದೇಶ ಸೇವೆ ಮಾಡಿರುವ ನನಗೆ ದಲಿತ ಎಂಬ ಕಾರಣಕ್ಕೆ ಈ ರೀತಿ ತಾರತಮ್ಯ ಎಸಗಲಾಗಿದೆ. ಇದು ಕೇವಲ ನನಗಾದ ಅವಮಾನವಲ್ಲ, ಇಡೀ ದಲಿತ ಸಮುದಾಯಕ್ಕೆ ಹಾಗೂ ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ಕಳವಳ ವ್ಯಕ್ತಪಡಿಸಿದರು.
ತಮ್ಮ ಸುದೀರ್ಘ ರಾಜಕೀಯ ಜೀವನವನ್ನು ಸ್ಮರಿಸಿದ ಖರ್ಗೆ, ನಾನು ಯಾವುದೇ ಧರ್ಮ ಅಥವಾ ಜಾತಿಯ ವಿರುದ್ಧ ಎಂದಿಗೂ ಮಾತನಾಡಿಲ್ಲ. ದಲಿತನೆಂಬ ಕಾರಣಕ್ಕೆ ನಾನು ಯಾರ ಮುಂದೆಯೂ ಭಿಕ್ಷೆ ಬೇಡಿಲ್ಲ. ಈ ಕೃತ್ಯದ ಹಿಂದೆ ಬಿಜೆಪಿ ಬೆಂಬಲಿತ ಸಂಘಟನೆಗಳ ಕೈವಾಡವಿದ್ದು, ಇಂತಹ ಮನಸ್ಥಿತಿಯ ಆರೋಪಿಗಳನ್ನು ಸರ್ಕಾರ ತಕ್ಷಣವೇ ಬಂಧಿಸಬೇಕು. ಸಂವಿಧಾನ ನಮಗೆ ನೀಡಿದ ಹಕ್ಕಿನ ಮೂಲಕ ನಾನು ಈ ಅನ್ಯಾಯದ ವಿರುದ್ಧ ಕೊನೆಯವರೆಗೂ ಹೋರಾಟ ನಡೆಸುತ್ತೇನೆ ಎಂದು ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಖರ್ಗೆ ಅವರು ವಿಷಯ ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಸಮಸ್ತ ವಿರೋಧ ಪಕ್ಷಗಳ ನಾಯಕರು ಎದ್ದು ನಿಂತು ಬಿಜೆಪಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದರು. ‘ಶೇಮ್ ಶೇಮ್’ ಎಂದು ಘೋಷಣೆ ಕೂಗಿ ಆಡಳಿತ ಪಕ್ಷದ ವಿರುದ್ಧ ಕಡುಕೋಪ ಪ್ರದರ್ಶಿಸಿದರು. ಸದನದಲ್ಲಿ ವಾತಾವರಣ ಕಾವೇರುತ್ತಿದ್ದಂತೆ ತಕ್ಷಣವೇ ಎದ್ದುನಿಂತ ರಾಜ್ಯಸಭೆಯ ಆಡಳಿತ ಪಕ್ಷದ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಇಂತಹ ಜಾತಿಯ ಮೂಲದ ತಾರತಮ್ಯಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ಈ ಘಟನೆಯ ಸತ್ಯಾಸತ್ಯತೆಯನ್ನು ತಕ್ಷಣವೇ ಪರಿಶೀಲಿಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಈ ಘಟನೆಯು ದೇಶಾದ್ಯಂತ ದಲಿತ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ತೀವ್ರ ಕೆಂಗಣ್ಣಿಗೆ ಗುರಿಯಾಗಿದ್ದು, ಬಿಜೆಪಿಯ ಅಸ್ಪೃಶ್ಯತಾ ಮನಸ್ಥಿತಿಗೆ ಸಾಕ್ಷಿ ಎಂದು ವಿಪಕ್ಷಗಳು ಕಟುವಾಗಿ ವೀಕ್ಷಿಸುತ್ತಿವೆ.








