ಮುಂಬೈ: ಕನ್ನಡದ ‘ಸೂರ್ಯವಂಶ’ ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಸಾಮಾಜಿಕ ಜಾಲತಾಣದ ವೀಡಿಯೊ ಮೂಲಕ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ತಾವು ಹೆಮ್ಮೆಯ ‘ಅಂಧಭಕ್ತೆ’ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದು, ಈ ವಿಡಿಯೋ ಸದ್ಯ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ತಮ್ಮ ದೇಶದ ಬೆಳವಣಿಗೆ ಮತ್ತು ಪ್ರಗತಿಯನ್ನು ಕಂಡು ಹೆಮ್ಮೆಪಡುವುದೇ ಭಕ್ತಿ ಎಂದಾದರೆ, ಅಂತಹ ಭಕ್ತೆ ಅಥವಾ ಅಂಧಭಕ್ತೆ ಎನ್ನಿಸಿಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ ಮತ್ತು ಹೆಮ್ಮೆಯಿದೆ ಎಂದು 49 ವರ್ಷದ ನಟಿ ಇಶಾ ಸ್ಪಷ್ಟಪಡಿಸಿದ್ದಾರೆ.
ನನಗೆ ದೇಶವೇ ಮೊದಲು, ರಾಜಕೀಯ ಪಕ್ಷವಲ್ಲ
ತಮ್ಮ ವಿಡಿಯೋದಲ್ಲಿ ಮುಕ್ತವಾಗಿ ಮಾತನಾಡಿರುವ ಇಶಾ ಕೊಪ್ಪಿಕರ್, ಹೌದು, ನಾನು ಅಂಧಭಕ್ತೆ. ದೇಶವನ್ನು ಪೂರ್ಣಮನಸ್ಸಿನಿಂದ ಪ್ರೀತಿಸುವುದು ಮತ್ತು ಅದು ವೇಗವಾಗಿ ಪ್ರಗತಿ ಹೊಂದುವುದನ್ನು ನೋಡಿ ಹೆಮ್ಮೆಪಡುವುದು ಭಕ್ತಿ ಎಂದಾದರೆ, ನಾನು ಖಂಡಿತ ಭಕ್ತೆ. ಆದರೆ ನನ್ನ ಈ ಭಕ್ತಿ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಮೇಲಲ್ಲ, ಬದಲಿಗೆ ನನ್ನ ತಾಯ್ನಾಡಿನ ಮೇಲೆ. ನನಗೆ ಯಾವಾಗಲೂ ದೇಶವೇ ಮೊದಲು. ಒಬ್ಬ ಪ್ರಜೆಯಾಗಿ ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಮತ್ತು ಭಿನ್ನಾಭಿಪ್ರಾಯ ಹೊಂದುವ ಹಕ್ಕು ನನಗಿದೆ. ಆದರೂ ನನ್ನ ದೇಶದ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವೇನು ಮಾಡಿದ್ದೇವೆ ಎಂದು ಯೋಚಿಸಿ
ಮುಂದುವರಿದು ದೇಶದ ಪ್ರಜೆಗಳಿಗೆ ಕರೆ ನೀಡಿರುವ ಅವರು, ದೇಶ ನಮಗೆ ಏನು ಮಾಡಿದೆ ಎಂದು ಸದಾ ದೂರುವ ಬದಲು, ನಾವು ದೇಶದ ಏಳಿಗೆಗೆ ಏನು ಕೊಡುಗೆ ನೀಡಬಹುದು ಎಂದು ಯೋಚಿಸುವ ಸಮಯ ಬಂದಿದೆ. ಭಾರತ ಇಂದು ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಹೊಸ ಭಾರತವನ್ನು ನಿರ್ಮಿಸಲು ನಮ್ಮ ಹಳೆಯ ಆಲೋಚನೆಗಳನ್ನು ನಾವು ಬದಲಾಯಿಸಿಕೊಳ್ಳಬೇಕಿದೆ. ಆದ್ದರಿಂದ ನನ್ನನ್ನು ಭಕ್ತೆ ಎನ್ನಿ, ಅಂಧಭಕ್ತೆ ಎನ್ನಿ ಅಥವಾ ರಾಷ್ಟ್ರವಾದಿ ಎನ್ನಿ, ನನಗೆ ಚಿಂತೆಯಿಲ್ಲ. ನಾನು ಭಾರತೀಯಳು, ನನ್ನ ದೇಶವನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ.
ತಮ್ಮ ಪೋಸ್ಟ್ನ ಕ್ಯಾಪ್ಷನ್ನಲ್ಲಿಯೂ ಇದೇ ಮಾತನ್ನು ಬರೆದುಕೊಂಡಿರುವ ಅವರು, ಭಾರತವನ್ನು ಪ್ರೀತಿಸುವುದು ಅಂಧಭಕ್ತಿ ಎಂದಾದರೆ, ಆ ಹೆಸರನ್ನು ನಾನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. ತಪ್ಪು ಅನಿಸಿದ್ದನ್ನು ಧೈರ್ಯವಾಗಿ ಪ್ರಶ್ನಿಸುವ ಮತ್ತು ಸರಿ ಅನಿಸಿದ್ದನ್ನು ಮುಕ್ತವಾಗಿ ಮೆಚ್ಚುವ ಹಕ್ಕು ನನಗಿದೆ ಎಂದು ಪುನರುಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ
ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರೊಂದಿಗೆ ‘ಸೂರ್ಯವಂಶ’ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ಇಶಾ ಕೊಪ್ಪಿಕರ್, ಹಿಂದಿ, ತೆಲುಗು, ತಮಿಳು ಹಾಗೂ ಮರಾಠಿ ಭಾಷೆಗಳಲ್ಲೂ ಜನಪ್ರಿಯ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸದ್ಯ ಇಶಾ ಅವರ ಈ ವೀಡಿಯೋ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರಿಂದ ಪರ-ವಿರೋಧದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಲವರು ಅವರ ನಿಷ್ಠುರ ದೇಶಪ್ರೇಮವನ್ನು ಶ್ಲಾಘಿಸಿದ್ದರೆ, ಮತ್ತೆ ಕೆಲವರು ಅವರ ಹೇಳಿಕೆಯನ್ನು ರಾಜಕೀಯ ನೆಲೆಯಲ್ಲಿ ವಿಶ್ಲೇಷಿಸುತ್ತಿದ್ದಾರೆ.








