ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮದ ನಡುವೆಯೇ ಕಿಡಿಗೇಡಿಗಳ ಅತಿರೇಕದ ವರ್ತನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಟಿಪ್ಪು ಸುಲ್ತಾನ್ ಕಟೌಟ್ ಮುಂದೆ ಪಾಕಿಸ್ತಾನಿ ಪರವಾದ ಹಾಡನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಪೊಲೀಸರು ರೋಷನ್ ಎಂಬ ಯುವಕನನ್ನು ಬಂಧಿಸಿದ್ದಾರೆ.
ನಗರದಲ್ಲಿ ಈದ್ ಮಿಲಾದ್ ಅಂಗವಾಗಿ ಟಿಪ್ಪು ನಗರ ಬಡಾವಣೆಯಲ್ಲಿ ಸುಮಾರು 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ನಿರ್ಮಿಸಲಾಗಿದೆ. ಈ ಕಟೌಟ್ ಬಳಿ ವಿಡಿಯೋ ಚಿತ್ರೀಕರಿಸಿದ್ದ ಕಿಡಿಗೇಡಿಗಳು, ಅದಕ್ಕೆ ಪಾಕಿಸ್ತಾನದ ಮುಜಾಹಿದ್ ಗೆ ಸಂಬಂಧಿಸಿದ ಪ್ರಚೋದನಾಕಾರಿ ಹಾಡನ್ನು ಜೋಡಿಸಿದ್ದರು. ಈ ವಿಡಿಯೋವನ್ನು ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಇದು ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.
ಪೊಲೀಸರ ಮಿಂಚಿನ ಕಾರ್ಯಾಚರಣೆ
ವಿಡಿಯೋ ಗಮನಿಸಿದ ನಗರ ಠಾಣೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ವಿಡಿಯೋ ಸೃಷ್ಟಿಸಿದ 23 ವರ್ಷದ ರೋಷನ್ ಎಂಬ ಯುವಕನನ್ನು ಬಂಧಿಸಲಾಗಿದ್ದು, ಈ ಕೃತ್ಯದಲ್ಲಿ ಭಾಗಿಯಾದ ಶಂಕೆಯ ಮೇಲೆ ಇತರ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಡಿಯೋ ರಚಿಸಿದವರು ಮಾತ್ರವಲ್ಲದೆ, ಅದನ್ನು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡವರು ಮತ್ತು ಹಂಚಿಕೊಂಡವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು, ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಈಗಾಗಲೇ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಯಾವುದೇ ಹೊಸ ಪದ್ಧತಿ ಅಥವಾ ಪ್ರಚೋದನಾಕಾರಿ ಮಾರ್ಗಗಳಿಗೆ ಅವಕಾಶ ನೀಡುವುದಿಲ್ಲ. ಧಾರ್ಮಿಕ ಹಬ್ಬಗಳಿಗೆ ರಾಜಕೀಯ ಅಥವಾ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡಿದರೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸದ್ಯ ಬಿಗುವಿನ ವಾತಾವರಣವಿದ್ದು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ಹಂಚಿಕೊಳ್ಳದಂತೆ ಜನರಲ್ಲಿ ಮನವಿ ಮಾಡಲಾಗಿದೆ.








