ಮೈಸೂರು: ಗಣೇಶೋತ್ಸವದ ಸಡಗರದ ನಡುವೆಯೇ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಎಚ್ಚರಿಕೆಯ ವೀಡಿಯೋ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆಯ ವಿಚಾರವಾಗಿ ಯುವಕರ ಗುಂಪಿಗೆ ವಾರ್ನಿಂಗ್ ನೀಡಿರುವ ಇನ್ಸ್ಪೆಕ್ಟರ್ ಧನಂಜಯ್ ಅವರ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿವೆ.
ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿರುವ ಇನ್ಸ್ಪೆಕ್ಟರ್ ಧನಂಜಯ್, ಮೆರವಣಿಗೆಯ ಮಾರ್ಗಸೂಚಿಗಳ ಬಗ್ಗೆ ಕಠಿಣ ಸೂಚನೆ ನೀಡಿದ್ದಾರೆ. ನಾವು ನಿಗದಿಪಡಿಸಿದ ದಾರಿಯಲ್ಲೇ ಗಣೇಶನ ಮೆರವಣಿಗೆ ಸಾಗಬೇಕು. ಯಾವುದೇ ಕಾರಣಕ್ಕೂ ಮಸೀದಿ ಇರುವ ರಸ್ತೆಯಲ್ಲಿ ಮೆರವಣಿಗೆ ಹೋಗುವಂತಿಲ್ಲ ಮತ್ತು ಮಸೀದಿಯ ಮುಂದೆ ಪಟಾಕಿ ಸಿಡಿಸುವಂತಿಲ್ಲ ಎಂದು ಅವರು ಗುಡುಗಿದ್ದಾರೆ.
ಕೇವಲ ಸೂಚನೆ ನೀಡುವುದಕ್ಕೆ ಸೀಮಿತವಾಗದ ಅಧಿಕಾರಿ, ಅಕಸ್ಮಾತ್ ಯಾರಾದರೂ ನಿಯಮ ಮೀರಿ ಮಸೀದಿ ಮುಂದೆ ಮೆರವಣಿಗೆ ತಂದರೆ ಅಥವಾ ಪಟಾಕಿ ಹೊಡೆದರೆ ನಿಮ್ಮ ಗ್ರಹಚಾರ ಬಿಡಿಸುತ್ತೇನೆ ಎಂದು ಅಸಭ್ಯವಾಗಿ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ನಾನು ಬಾಯಲ್ಲಿ ಹೇಳುವುದಿಲ್ಲ, ಬದಲಾಗಿ ಕ್ರಮ ಕೈಗೊಂಡು ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕುವ ರೀತಿಯಲ್ಲಿ ಮಾತನಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಪೊಲೀಸ್ ಇಲಾಖೆಯು ಹಬ್ಬದ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಇಂತಹ ಕ್ರಮಗಳನ್ನು ಕೈಗೊಳ್ಳುವುದು ಸಾಮಾನ್ಯವಾದರೂ, ಅಧಿಕಾರಿಯೊಬ್ಬರು ಬಳಸಿದ ಭಾಷೆ ಮತ್ತು ಧಮ್ಕಿ ಹಾಕುವ ಶೈಲಿ ಈಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಮಸೀದಿ ಮುಂದೆ ಮೆರವಣಿಗೆ ಹೋಗಬಾರದು ಎಂಬ ನಿಯಮದ ಬಗ್ಗೆ ಪರ ವಿರೋಧ ಚರ್ಚೆಗಳು ಶುರುವಾಗಿದ್ದು, ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಗಣೇಶೋತ್ಸವದ ಭದ್ರತೆಯ ನೆಪದಲ್ಲಿ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತೆ ಮಾತನಾಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.







