ಬೆಂಗಳೂರು: ರಾಷ್ಟ್ರಗೀತೆ ಮತ್ತು ದೇಶಭಕ್ತಿಯ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದ ಈಗ ತಾರಕಕ್ಕೇರಿದೆ. ವಂದೇ ಮಾತರಂ ಗೀತೆಯ ಗಾಯನ ಮತ್ತು ದೇಶಭಕ್ತಿಯ ನೈಜ ಇತಿಹಾಸದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದವರಿಂದ ನಾವು ದೇಶಭಕ್ತಿ ಕಲಿಯಬೇಕಿಲ್ಲ ಎಂದು ಗುಡುಗಿದ್ದಾರೆ.
ವಂದೇ ಮಾತರಂ ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿರುವ ಬಗ್ಗೆ ಬಿಜೆಪಿಯ ಟೀಕೆಗಳಿಗೆ ಉತ್ತರಿಸಿದ ಖರ್ಗೆ, ಈ ನಿರ್ಧಾರ ಇಂದು ನಿನ್ನೆಯದಲ್ಲ. 1937ರಲ್ಲೇ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರಂತಹ ಅಪ್ರತಿಮ ರಾಷ್ಟ್ರನಾಯಕರು ಸಭೆ ಸೇರಿ ಎರಡು ಚರಣಗಳನ್ನು ಹಾಡಲು ತೀರ್ಮಾನಿಸಿದ್ದರು. ಈಗ ಪ್ರಶ್ನೆ ಮಾಡುತ್ತಿರುವ ಬಿಜೆಪಿಯವರು ಈ ಮಹಾನ್ ನಾಯಕರಿಗಿಂತ ದೊಡ್ಡವರೇ ಎಂದು ಖಾರವಾಗಿ ಪ್ರಶ್ನಿಸಿದರು.
ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಈ ಹಿಂದೆ ವಾಜಪೇಯಿ ಅವರ ಸರ್ಕಾರ ಇದ್ದಾಗ ಈ ನಿಯಮವನ್ನು ಬದಲಾಯಿಸಲು ಯಾಕೆ ಮುಂದಾಗಲಿಲ್ಲ? ಆಗ ನೆನಪಿಗೆ ಬಾರದ ದೇಶಭಕ್ತಿ ಈಗ ಚುನಾವಣೆ ಅಥವಾ ರಾಜಕೀಯ ಲಾಭಕ್ಕಾಗಿ ನೆನಪಾಗುತ್ತಿದೆಯೇ ಎಂದು ಅವರು ಕುಟುಕಿದರು.
ಇದೇ ವೇಳೆ ಇತಿಹಾಸದ ಪುಟಗಳನ್ನು ಬಿಚ್ಚಿಟ್ಟ ಸಚಿವರು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಪಾತ್ರ ಶೂನ್ಯವಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ವಿರುದ್ಧ ಹೋರಾಡಲು ಆಜಾದ್ ಹಿಂದ್ ಫೌಜ್ ಕಟ್ಟುತ್ತಿದ್ದರೆ, ಇತ್ತ ಆರ್ಎಸ್ಎಸ್ ಮತ್ತು ಸಾವರ್ಕರ್ ಬ್ರಿಟಿಷ್ ಸೇನೆಗೆ ಭಾರತೀಯರನ್ನು ಸೇರಿಸುವ ಕೆಲಸ ಮಾಡುತ್ತಿದ್ದರು. ಬ್ರಿಟಿಷರಿಂದ ತಿಂಗಳಿಗೆ 60 ರೂಪಾಯಿ ಪಿಂಚಣಿ ಪಡೆಯುತ್ತಿದ್ದ ಇತಿಹಾಸ ಹೊಂದಿರುವವರಿಂದ ನಾವು ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರಿಗೆ ಇತಿಹಾಸದ ಅರಿವಿಲ್ಲ ಅಥವಾ ಅರಿವಿದ್ದರೂ ಸುಳ್ಳು ಹರಡುವುದೇ ಅವರ ಕೆಲಸವಾಗಿದೆ. ದೇಶಕ್ಕಾಗಿ ಪ್ರಾಣ ಕೊಟ್ಟವರ ಇತಿಹಾಸ ಕಾಂಗ್ರೆಸ್ಸಿಗಿದೆ, ಆದರೆ ಬ್ರಿಟಿಷರಿಗೆ ಶರಣಾದವರ ಪರಂಪರೆ ಬಿಜೆಪಿಯದ್ದು ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು. ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗಳ ವೈಫಲ್ಯದ ಬಗ್ಗೆಯೂ ಇದೇ ಸಂದರ್ಭದಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು.







