ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ (BRICS) ಶೃಂಗಸಭೆಯ ಸಿದ್ಧತೆಗಳ ನಡುವೆಯೇ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ (ಎಎಪಿ) ಗಂಭೀರ ಆರೋಪ ಮಾಡಿದೆ. ಜಾಗತಿಕ ನಾಯಕರ ಮುಂದೆ ಭಾರತದ ಬಡತನ ಕಾಣಬಾರದು ಎಂಬ ಕಾರಣಕ್ಕೆ ದಿಲ್ಲಿಯ ಕೊಳೆಗೇರಿಗಳನ್ನು ಹಸಿರು ಪರದೆ ಮತ್ತು ಬಟ್ಟೆಗಳಿಂದ ಮರೆಮಾಚುತ್ತಿರುವ ಕ್ರಮವನ್ನು ಎಎಪಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಾಗ್ದಾಳಿ ನಡೆಸಿರುವ ಎಎಪಿ, ಕೇಂದ್ರ ಸರ್ಕಾರದ ಈ ನಡೆಯನ್ನು ದೇಶದ ಜಿಡಿಪಿ ಅಂಕಿಅಂಶಗಳ ಏರುಪೇರಿಗೆ ಹೋಲಿಸಿದೆ. 2.6 ಶೇ. ಜಿಡಿಪಿ ಬೆಳವಣಿಗೆಯನ್ನು 7.8 ಶೇ. ಎಂದು ಸುಳ್ಳು ಹೇಳಿದಂತೆಯೇ, ಕೊಳೆಗೇರಿಗಳಿಗೆ ಪರದೆ ಹಾಕುವುದರಿಂದ ವಾಸ್ತವ ಬದಲಾಗುವುದಿಲ್ಲ ಎಂದು ಪಕ್ಷ ಲೇವಡಿ ಮಾಡಿದೆ. ಪರದೆಗಳ ಹಿಂದೆ ಬಡತನವನ್ನು ಬಚ್ಚಿಡುವುದರಿಂದ ದೇಶದ ನೈಜ ಪರಿಸ್ಥಿತಿಯನ್ನು ಜಗತ್ತಿನಿಂದ ಮುಚ್ಚಿಡಲು ಸಾಧ್ಯವಿಲ್ಲ ಎಂದು ಟೀಕಿಸಿದೆ.
ವಿಶನ್ 2047 ಕಾರ್ಟೂನ್ ಮೂಲಕ ವ್ಯಂಗ್ಯ
ಕೇಂದ್ರದ ಅಭಿವೃದ್ಧಿಯ ಮಂತ್ರವನ್ನು ಲೇವಡಿ ಮಾಡಲು ಎಎಪಿ ವಿಶನ್ 2047 ಎಂಬ ಶೀರ್ಷಿಕೆಯಡಿ ಒಂದು ವ್ಯಂಗ್ಯಚಿತ್ರವನ್ನು ಹಂಚಿಕೊಂಡಿದೆ. ಇದರಲ್ಲಿ ಕನ್ನಡಿಯೊಳಗೆ ಅತ್ಯಾಧುನಿಕ ದಿಲ್ಲಿ ಮತ್ತು ಭಾರತ ಮಂಟಪ ಕಾಣಿಸಿದರೆ, ಕನ್ನಡಿಯ ಹೊರಭಾಗದಲ್ಲಿ ಅಸಲಿ ಕೊಳೆಗೇರಿಗಳು ಮತ್ತು ಕಸದ ರಾಶಿಗಳಿರುವುದನ್ನು ಚಿತ್ರಿಸಲಾಗಿದೆ. ಇದು ಕೇಂದ್ರದ ತೋರಿಕೆ ಅಭಿವೃದ್ಧಿಯ ಮುಖವಾಡವನ್ನು ಬಯಲು ಮಾಡುತ್ತದೆ ಎಂದು ಎಎಪಿ ಹೇಳಿದೆ.
ದಿಲ್ಲಿಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯುತಿದ್ದು, ಪ್ರಮುಖ ದೇಶಗಳ ನಾಯಕರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ಶೃಂಗಸಭೆಯ ಸ್ಥಳಕ್ಕೆ ಹೋಗುವ ರಸ್ತೆ ಬದಿಯ ಕೊಳೆಗೇರಿಗಳು ಕಾಣದಂತೆ ಬೃಹತ್ ಪರದೆಗಳನ್ನು ಅಳವಡಿಸಲಾಗಿದೆ. ಈ ಹಿಂದೆಯೂ ಜಿ20 ಶೃಂಗಸಭೆಯ ವೇಳೆ ಇಂತಹದ್ದೇ ಕ್ರಮ ಕೈಗೊಂಡಾಗ ಭಾರಿ ವಿರೋಧ ವ್ಯಕ್ತವಾಗಿತ್ತು.
ಪರದೆಗಳನ್ನು ಬಡವರಿಗೇ ನೀಡಿ
ಸರ್ಕಾರದ ಈ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕೇವಲ ಮೂರು ದಿನಗಳ ಪ್ರದರ್ಶನಕ್ಕಾಗಿ ಇಷ್ಟೊಂದು ಹಣ ಖರ್ಚು ಮಾಡಿ ಪರದೆಗಳನ್ನು ಕಟ್ಟುವ ಬದಲು, ಆ ಬಡವರ ಬದುಕನ್ನು ಸುಧಾರಿಸಲು ಕ್ರಮ ಕೈಗೊಳ್ಳಿ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಸಮ್ಮೇಳನ ಮುಗಿದ ನಂತರ ಆ ಪರದೆಗಳು ಮತ್ತು ಟಾರ್ಪಾಲಿನ್ ಗಳನ್ನು ಆ ಬಡವರಿಗೇ ಉಡುಗೊರೆಯಾಗಿ ನೀಡಿ, ಅವರು ತಮ್ಮ ಮನೆಯ ಮೇಲ್ಛಾವಣಿಗೆ ಬಳಸಿಕೊಳ್ಳಲಿ ಎಂದು ಸಾರ್ವಜನಿಕರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆಯಾಗಿ, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ ಕಾಪಾಡುವ ಹೆಸರಲ್ಲಿ ಬಡವರನ್ನು ಮತ್ತು ಅವರ ವಸತಿ ಪ್ರದೇಶಗಳನ್ನು ಮರೆಮಾಚುತ್ತಿರುವ ಕೇಂದ್ರದ ನಡೆಯು ಈಗ ದೊಡ್ಡ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ.







