ಹಾಸನ: ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ವಿಚಿತ್ರ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ಈಗ ಲಂಚವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಅಧಿಕಾರಿಗಳಿಗೆ ಗೌರವಯುತವಾಗಿ ಏನು ಕೊಡಬೇಕೋ ಅದನ್ನು ಕೊಡುವುದು ಧರ್ಮ ಎಂದು ಹೇಳುವ ಮೂಲಕ ಭ್ರಷ್ಟಾಚಾರವನ್ನು ಸಾರ್ವಜನಿಕವಾಗಿ ಪ್ರೋತ್ಸಾಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಕಲೇಶಪುರ ತಾಲೂಕಿನಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವರು, ಯಾವುದೇ ಕೆಲಸವಾದಾಗ ಸರ್ಕಾರಿ ಅಧಿಕಾರಿಗಳಿಗೆ ಗೌರವಯುತವಾಗಿ ಏನು ಕೊಡಬೇಕೋ ಅದನ್ನು ಕೊಡುವುದು ಧರ್ಮ ಎಂದು ಹೇಳಿಕೆ ನೀಡಿದ್ದರು. ಸಚಿವರ ಈ ಮಾತುಗಳು ಲಂಚವನ್ನು ಸಾಮಾನ್ಯೀಕರಿಸುವಂತಿದೆ ಎಂದು ಪ್ರತಿಪಕ್ಷಗಳು ಕೆಂಡಾಮಂಡಲವಾಗಿವೆ. ಈ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಜೆಡಿಎಸ್ ಮತ್ತು ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ಕಲೆಕ್ಷನ್ ಗಿರಾಕಿಗಳ ಸರ್ಕಾರ ಎಂದು ಲೇವಡಿ ಮಾಡಿವೆ.
ಲಂಚಕ್ಕೆ ಗೌರವದ ಹೆಸರಿಟ್ಟ ಕಾಂಗ್ರೆಸ್ ಜೆಡಿಎಸ್ ಆಕ್ರೋಶ
ಸಚಿವ ಶಿವಲಿಂಗೇಗೌಡ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್, ಭ್ರಷ್ಟಾಚಾರಕ್ಕೆ ಸಚಿವರು ಬಹಿರಂಗ ಆಹ್ವಾನ ನೀಡುತ್ತಿದ್ದಾರೆ ಎಂದು ಕಿಡಿಕಾರಿದೆ. ಶಿಕ್ಷಕರಿಗೆ ಗೌರವ ನೀಡಿದಂತೆ ಲಂಚಕ್ಕೂ ಗೌರವ ಸೂಚಕ ಹೆಸರಿಟ್ಟಿದೆ ಈ ಕಲೆಕ್ಷನ್ ಕಾಂಗ್ರೆಸ್ ಸರ್ಕಾರ. ಅಧಿಕಾರಿಗಳಿಗೆ ಗೌರವಯುತವಾಗಿ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದು ಧರ್ಮ ಎಂದು ಹೇಳಲು ಸಚಿವರಿಗೆ ನಾಚಿಕೆಯಾಗಬೇಕು. ಇದು ಕೇವಲ ಬಾಯಿ ತಪ್ಪಲ್ಲ, ಇಡೀ ಸರ್ಕಾರದ ವಸೂಲಿ ದಂಧೆಯ ಅಸಲಿ ಮುಖ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ವಸೂಲಿ ಕಾಂಗ್ರೆಸ್ ಗೆ ಜನರೇ ಪಾಠ ಕಲಿಸುತ್ತಾರೆ ಬಿಜೆಪಿ ಎಚ್ಚರಿಕೆ
ಬಿಜೆಪಿ ಕೂಡ ಸಚಿವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದು, ಲಂಚ ಕೊಡೋದು ಧರ್ಮ ಎನ್ನುವ ಸಚಿವರಿಗೆ ಜನರೇ ಕ್ಲಾಸ್ ತೆಗೆದುಕೊಳ್ಳುವ ಕಾಲ ಹತ್ತಿರದಲ್ಲಿದೆ ಎಂದು ಹೇಳಿದೆ. ದಿನಬೆಳಗಾದರೆ ವಸೂಲಿ ದಂಧೆ ಮಾಡುವುದೇ ಇವರ ಕೆಲಸವಾಗಿದೆ. ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವುದನ್ನು ಧರ್ಮ ಎಂದು ಸಾರುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಸಚಿವರಿಗೆ ಸಾರ್ವಜನಿಕರಿಂದಲೇ ತರಾಟೆ
ವಿಶೇಷವೆಂದರೆ, ಕಾರ್ಯಕ್ರಮದಲ್ಲಿದ್ದ ವ್ಯಕ್ತಿಯೊಬ್ಬರು ಸಚಿವರ ಮಾತನ್ನು ಅಲ್ಲೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಅಧಿಕಾರಿಗಳಿಗೆ ಲಂಚ ಕೊಡಬೇಕು ಎಂದು ನೀವು ಬಹಿರಂಗವಾಗಿ ಹೇಳುತ್ತಿದ್ದೀರಾ ಎಂದು ಆ ವ್ಯಕ್ತಿ ನೇರವಾಗಿ ಪ್ರಶ್ನಿಸಿದಾಗ ಸಚಿವರು ತಬ್ಬಿಬ್ಬಾದರು. ಬಳಿಕ ಸಮಜಾಯಿಷಿ ನೀಡಲು ಪ್ರಯತ್ನಿಸಿದ ಶಿವಲಿಂಗೇಗೌಡರು, ಗೌರವಯುತವಾಗಿ ಅಂದರೆ ಅಧಿಕಾರಿಗಳನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳುತ್ತಿದ್ದೇನೆ ಎಂದು ಉಲ್ಟಾ ಹೊಡೆದರು. ಆದರೆ ಸಚಿವರ ಈ ಸಬೂಬನ್ನು ಜನರು ಒಪ್ಪುವ ಸ್ಥಿತಿಯಲ್ಲಿರಲಿಲ್ಲ. ಒಟ್ಟಾರೆಯಾಗಿ ಸಚಿವರ ಈ ಹೇಳಿಕೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.








