ಮಂಗಳೂರು: ಕರಾವಳಿ ಭಾಗದಲ್ಲಿ ರಾಜ್ಯ ಸರ್ಕಾರ ನಡೆಸಿದ ಸಚಿವ ಸಂಪುಟ ಸಭೆಯು ಕೇವಲ ಒಂದು ಬೂಟಾಟಿಕೆ ಮತ್ತು ಸಂಪೂರ್ಣವಾಗಿ ನಿಷ್ಪ್ರಯೋಜಕ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತೀವ್ರವಾಗಿ ಟೀಕಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳೂರು ರೈಲ್ವೆ ವಿಭಾಗವನ್ನು ನೈಋತ್ಯ ವಲಯಕ್ಕೆ ಸೇರಿಸುವ ಮೂಲಕ ಕೇಂದ್ರ ಸರ್ಕಾರ ಕರಾವಳಿ ಜನರ ದಶಕಗಳ ಬೇಡಿಕೆಯನ್ನು ಈಡೇರಿಸಿದೆ. ಈ ಐತಿಹಾಸಿಕ ನಿರ್ಧಾರಕ್ಕೆ ಸಚಿವ ಸಂಪುಟ ಸಭೆಯಲ್ಲಿ ಕೃತಜ್ಞತೆ ಸಲ್ಲಿಸುವ ದೊಡ್ಡತನವನ್ನು ರಾಜ್ಯ ಸರ್ಕಾರ ತೋರಬೇಕಿತ್ತು. ಆದರೆ ಕೇರಳ ಸರ್ಕಾರಕ್ಕೆ ಹೆದರಿ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸದ ರಾಜ್ಯ ಸರ್ಕಾರ ತನ್ನ ಸಣ್ಣತನವನ್ನು ಪ್ರದರ್ಶಿಸಿದೆ ಎಂದು ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಬಗ್ಗೆ ಲೇವಡಿ ಮಾಡಿದ ಅವರು, ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಕೇವಲ ಬಾಯಿ ಮಾತಿನಲ್ಲೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಾಲ ಕಳೆಯುತ್ತಿದ್ದಾರೆ. ಮುಖ್ಯಮಂತ್ರಿಗಳ ಈ ವೇಗಕ್ಕೆ ಬಹಳ ಬೇಗನೆ ಬ್ರೇಕ್ ಬೀಳಲಿದೆ. ಕರಾವಳಿ ಜನರು ದಡ್ಡರಲ್ಲ, ಅವರಿಗೆ ದೇಶವನ್ನು ರಕ್ಷಿಸುವ ಮೋದಿ ಬೇಕೇ ಹೊರತು ದೇಶ ವಿಭಜಿಸುವ ಮತ್ತು ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್ ಅಲ್ಲ ಎಂದು ಗುಡುಗಿದರು.
ಕರಾವಳಿಯಲ್ಲಿ ನಡೆದ ಈ ಸಚಿವ ಸಂಪುಟ ಸಭೆಯನ್ನು ಬಂದ ಪುಟ್ಟ ಹೋದ ಪುಟ್ಟ ಎಂದು ಜರಿದ ಸೋಮಣ್ಣ, ಸಚಿವ ಬಾಲಕೃಷ್ಣ ಅವರು ಪ್ರಧಾನಿ ಬಗ್ಗೆ ನೀಡುತ್ತಿರುವ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಾಲಕೃಷ್ಣ ಅವರಿಗೆ ಮೊದಲು ನೈತಿಕತೆ ಇರಲಿ, ಒಳ್ಳೆಯ ನಡವಳಿಕೆಯನ್ನು ಕಲಿತು ಮಾತನಾಡಲಿ ಎಂದು ಸೋಮಣ್ಣ ಸಲಹೆ ನೀಡಿದರು. ಒಟ್ಟಾರೆಯಾಗಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಇಂತಹ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ದೂರಿದರು.
ವಿ ಸೋಮಣ್ಣ ಅವರು ನೀಡಿದ ಈ ಹೇಳಿಕೆಗಳು ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರದ ನಡುವಿನ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ.








