ಭೋಪಾಲ್, ಜುಲೈ 20: ರಾಜಸ್ಥಾನದಲ್ಲಿನ ರಾಜಕೀಯ ನಾಟಕಕ್ಕೆ ಬಿಜೆಪಿಯನ್ನು ದೂಷಿಸುತ್ತಿರುವ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಭಾನುವಾರ ಸಚಿನ್ ಪೈಲಟ್‌ಗೆ ಕಾಂಗ್ರೆಸ್ ಪಕ್ಷವನ್ನು ತೊರೆಯದಂತೆ ಕೇಳಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್, ಪೈಲಟ್ ಅವರು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಅನುಸರಿಸಬಾರದು, ಏಕೆಂದರೆ ಅವರಿಗೆ ಕಾಂಗ್ರೆಸ್ ನಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಪೈಲಟ್ ಬಹಿರಂಗವಾಗಿ ದಂಗೆ ಎದ್ದಿದ್ದು, ಕನಿಷ್ಠ 18 ಶಾಸಕರು ಪೈಲಟ್ ಅವರನ್ನು ಬೆಂಬಲಿಸಿದ್ದಾರೆ.
ಇತ್ತೀಚೆಗೆ ರಾಜಸ್ಥಾನ ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿ ಪೈಲಟ್ ಅವರನ್ನು ವಜಾಗೊಳಿಸಲಾಗಿತ್ತು ಮತ್ತು ಕುದುರೆ ವ್ಯಾಪಾರದಲ್ಲಿ ತೊಡಗುವ ಮೂಲಕ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ನಿಮಗಿನ್ನೂ ಚಿಕ್ಕ ವಯಸ್ಸು, ಸಿಂಧಿಯಾ ಮಾಡಿದ ತಪ್ಪನ್ನು ನೀವೂ ಮಾಡಬೇಡಿ. ಬಿಜೆಪಿ ವಿಶ್ವಾಸಾರ್ಹವಲ್ಲ. ಬೇರೆ ಯಾವುದೇ ಪಕ್ಷದಿಂದ ಸೇರಿಕೊಂಡ ಯಾರೂ ಅಲ್ಲಿ ಯಶಸ್ವಿಯಾಗಲಿಲ್ಲ ಎಂದು ದಿಗ್ವಿಜಯ ಸಿಂಗ್ ಹೇಳಿದರು.
ಸಚಿನ್ ನನ್ನ ಮಗನಂತೆ. ಅವರು ನನ್ನನ್ನು ಗೌರವಿಸುತ್ತಾರೆ ಮತ್ತು ನಾನು ಕೂಡ ಅವರನ್ನು ಇಷ್ಟಪಡುತ್ತೇನೆ. ನಾನು ಅವರಿಗೆ ಮೂರು-ನಾಲ್ಕು ಬಾರಿ ಕರೆ ಮಾಡಿದೆ ಮತ್ತು ಸಂದೇಶ ಕಳುಹಿಸಿದೆ. ಆದರೆ ಅವರು ಪ್ರತಿಕ್ರಿಯಿಸಲಿಲ್ಲ. ಪೈಲಟ್ ತನಗೆ ಸ್ಪಂದಿಸದಿರುವುದು ಇದೇ ಮೊದಲು ಎಂದು ಅವರು ಹೇಳಿದರು.
ಮಹತ್ವಾಕಾಂಕ್ಷೆಯಾಗಿರುವುದು ಒಳ್ಳೆಯದು. ಮಹತ್ವಾಕಾಂಕ್ಷೆಗಳಿಲ್ಲದೆ ಒಬ್ಬರು ಹೇಗೆ ಮುಂದುವರಿಯಬಹುದು, ಆದರೆ ಮಹತ್ವಾಕಾಂಕ್ಷೆಯ ಜೊತೆಗೆ, ನಿಮ್ಮ ಸಂಸ್ಥೆ, ಸಿದ್ಧಾಂತ ಮತ್ತು ರಾಷ್ಟ್ರದ ಬಗ್ಗೆಯೂ ಬದ್ಧತೆಯನ್ನು ಹೊಂದಿರಬೇಕು ಎಂದು ಸಿಂಗ್ ಹೇಳಿದರು.
ಅವರು (ಪೈಲಟ್) ಹೊಸ ಪಕ್ಷವನ್ನು ರಚಿಸುತ್ತಾರೆ ಎಂದು ನಾನು ಕೇಳಿದೆ. ಆದರೆ ಅದರ ಅವಶ್ಯಕತೆ ಏನಿದೆ. ಕಾಂಗ್ರೆಸ್ ಅವರಿಗೆ ಏನನ್ನೂ ನೀಡಿಲ್ಲವೇ? ಅವರನ್ನು 26ನೇ ವಯಸ್ಸಿಗೆ ಸಂಸದರಾಗಿ, 32ನೇ ವಯಸ್ಸಿಗೆ ಕೇಂದ್ರ ಸಚಿವರನ್ನಾಗಿ, 34 ನೇ ವಯಸ್ಸಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನು ಮತ್ತು 38ನೇ ವಯಸ್ಸಿಗೆ ಉಪಮುಖ್ಯಮಂತ್ರಿ. ಅವರಿಗೆ ಇನ್ನೇನು ಬೇಕು? ಅವರ ಬಳಿ ಸಮಯವಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೇಳಿದರು.
ಪೈಲಟ್‌ಗೆ ಏನಾದರೂ ಸಮಸ್ಯೆ ಇದ್ದರೆ, ರಾಜ್ಯ ಪಕ್ಷದ ಘಟಕದ ಅಧ್ಯಕ್ಷರಾಗಿ ಅವರು ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕಾಗಿತ್ತು. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪೈಲಟ್ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನದ ಉಸ್ತುವಾರಿ ಅವಿನಾಶ್ ಪಾಂಡೆ ಅವರನ್ನು ಸಂಪರ್ಕಿಸಿ, ಗೆಹ್ಲೋಟ್ ಅವರೊಂದಿಗೆ ಮಾತುಕತೆ ನಡೆಸಬಹುದಿತ್ತು ಎಂದು ಅವರು ಹೇಳಿದರು.

ನಿಮ್ಮ ಶಾಸಕರ ಮೇಲೆ ನಿಮಗೆ ನಂಬಿಕೆ ಇದ್ದರೆ, ಅವರಲ್ಲಿ 18-19ರನ್ನು ಹರಿಯಾಣದ ಮಾನೇಸರ್‌ನಲ್ಲಿರುವ ಐಟಿಸಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ಏಕೆ ಸೀಮಿತಗೊಳಿಸಿದ್ದೀರಿ ಎಂದು ದಿಗ್ವಿಜಯ ಸಿಂಗ್ ಪ್ರಶ್ನಿಸಿದರು.
ಬಿಜೆಪಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶದ ಶಾಸಕರನ್ನು (ಆ ರಾಜ್ಯಗಳಲ್ಲಿ ರಾಜಕೀಯ ನಾಟಕಗಳ ಸಮಯದಲ್ಲಿ) ಇರಿಸಿದ್ದ ಅದೇ ಹೋಟೆಲ್ ಇದಾಗಿದೆ ಎಂದು ಹೇಳಿದ ಅವರು ಪೈಲಟ್ ಏನಾಯಿತು ಎಂಬುದನ್ನು ಮರೆತುಬಿಡಬೇಕು, ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಕಾಂಗ್ರೆಸ್ ಅನ್ನು ಹೇಗೆ ಬಲಪಡಿಸಬಹುದು ಎಂಬ ಬಗ್ಗೆ ಯೋಚಿಸಿಬೇಕು ಎಂದು ಅವರು ಹೇಳಿದರು








