ನವದೆಹಲಿ: ಭಾರತೀಯ ರಾಜಕಾರಣದ ಅತ್ಯಂತ ಪ್ರಭಾವಿ ಕುಟುಂಬ ಎಂದೇ ಗುರುತಿಸಲ್ಪಡುವ ಗಾಂಧಿ ಕುಟುಂಬದ ಒಡಹುಟ್ಟಿದವರ ನಡುವೆ ಈಗ ಬಿರುಕು ಮೂಡಿದೆಯೇ ಎಂಬ ಅನುಮಾನವನ್ನು ಬಿಜೆಪಿ ವ್ಯಕ್ತಪಡಿಸಿದೆ. ನವದೆಹಲಿಯ ಬಿಕಾನೇರ್ ಹೌಸ್ ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೆಹಾನ್ ವಾದ್ರಾ ಅವರ ಛಾಯಾಚಿತ್ರ ಪ್ರದರ್ಶನದ ವಿವಾದ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ವಿಯೆಟ್ನಾಂ ಪ್ರವಾಸದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದ ಪ್ರತಿಯೊಂದು ಸಣ್ಣ ವಿಷಯಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಾರೆ, ಆದರೆ ತಮ್ಮದೇ ಅಳಿಯ ರೆಹಾನ್ ವಾದ್ರಾ ಎದುರಿಸುತ್ತಿರುವ ವಿವಾದದ ಬಗ್ಗೆ ಮೌನ ತಾಳಿರುವುದು ಏಕೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರಶ್ನಿಸಿದ್ದಾರೆ.
ಅಳಿಯನ ಬೆನ್ನಿಗೆ ನಿಲ್ಲದ ಮಾವನ ನಿಗೂಢ ಮೌನ
ಬಿಕಾನೇರ್ ಹೌಸ್ ಆಡಳಿತ ಮಂಡಳಿಯು ರೆಹಾನ್ ವಾದ್ರಾ ಅವರಿಗೆ ನೀಡಿರುವ ನೋಟಿಸ್ ಅನ್ನು ಉಲ್ಲೇಖಿಸಿ ದಾಳಿ ನಡೆಸಿರುವ ಬಿಜೆಪಿ, ಗಾಂಧಿ ಕುಟುಂಬದ ಒಳಗೆ ಅಧಿಕಾರ ಮತ್ತು ನಾಯಕತ್ವಕ್ಕಾಗಿ ಭಾರಿ ಸಂಚು ನಡೆಯುತ್ತಿದೆ ಎಂದು ಆರೋಪಿಸಿದೆ. ಪ್ರಿಯಾಂಕಾ ಗಾಂಧಿ ಅವರು ತಮ್ಮ ಪುತ್ರ ರೆಹಾನ್ ವಾದ್ರಾ ಅವರನ್ನು ರಾಜಕೀಯವಾಗಿ ಸಾಫ್ಟ್ ಲಾಂಚ್ ಮಾಡಲು ಈ ಛಾಯಾಚಿತ್ರ ಪ್ರದರ್ಶನವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಅವರಿಗೆ ಈ ಬೆಳವಣಿಗೆ ಇಷ್ಟವಿಲ್ಲದಿರುವುದು ಅವರ ಮೌನದಿಂದ ಸಾಬೀತಾಗುತ್ತಿದೆ. ಪ್ರಿಯಾಂಕಾ ಅವರಿಗೆ ತಮ್ಮ ಅಣ್ಣನ ರಾಜಕೀಯ ಶೈಲಿಯ ಮೇಲಿದ್ದ ವಿಶ್ವಾಸ ಈಗ ಮರೆಯಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಬಿಕಾನೇರ್ ಹೌಸ್ ನಲ್ಲಿ ನಡೆದಿದ್ದೇನು?
ರೆಹಾನ್ ವಾದ್ರಾ ಅವರು ನೋ ಐಡಿಯಾ ಈಸ್ ಫೈನಲ್ ಎಂಬ ಹೆಸರಿನಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದರು. ಆರಂಭದಲ್ಲಿ ಕೇವಲ ಪ್ರಕೃತಿ ಮತ್ತು ವನ್ಯಜೀವಿಗಳ ಫೋಟೋಗಳನ್ನು ಪ್ರದರ್ಶಿಸುವುದಾಗಿ ಅನುಮತಿ ಪಡೆಯಲಾಗಿತ್ತು. ಆದರೆ ಪ್ರದರ್ಶನದ ವೇಳೆ ಹಠಾತ್ತನೆ ರಾಷ್ಟ್ರಧ್ವಜ ಮತ್ತು ದೆಹಲಿಯಲ್ಲಿ ನಡೆದ ವಿವಿಧ ರಾಜಕೀಯ ಪ್ರತಿಭಟನೆಗಳ 70ಕ್ಕೂ ಹೆಚ್ಚು ಫೋಟೋಗಳನ್ನು ಅಳವಡಿಸಲಾಗಿತ್ತು. ಇದು ಸಂಸ್ಥೆಯ ನೀತಿ ನಿಯಮಗಳಿಗೆ ವಿರುದ್ಧವಾಗಿದ್ದು, ಕೇವಲ ವಾಣಿಜ್ಯ ಮತ್ತು ಕಲಾತ್ಮಕ ಉದ್ದೇಶದ ವೇದಿಕೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಕಾರಣಕ್ಕೆ ಆ ಫೋಟೋಗಳನ್ನು ತೆರವುಗೊಳಿಸಲು ಸೂಚಿಸಲಾಯಿತು. ಇದನ್ನು ರೆಹಾನ್ ವಾದ್ರಾ ಪ್ರತಿಭಟಿಸಿ ಇನ್ ಸ್ಟಾಗ್ರಾಮ್ ನಲ್ಲಿ ಆಕ್ರೋಶ ಹೊರಹಾಕಿದ್ದರು.
ಕುಟುಂಬ ರಾಜಕಾರಣದ ಹೊಸ ಸಮೀಕರಣ
ರೆಹಾನ್ ವಾದ್ರಾ ವಿವಾದವನ್ನು ಬಳಸಿಕೊಂಡು ಬಿಜೆಪಿ ಈಗ ಗಾಂಧಿ ಕುಟುಂಬದ ನಾಯಕತ್ವದ ಬಿಕ್ಕಟ್ಟನ್ನು ಬೀದಿಗೆ ತಂದಿದೆ. ಪ್ರಿಯಾಂಕಾ ಗಾಂಧಿ ತಮ್ಮ ಮಗನ ಭವಿಷ್ಯವನ್ನು ರೂಪಿಸಲು ಹವಣಿಸುತ್ತಿದ್ದರೆ, ರಾಹುಲ್ ಗಾಂಧಿ ಅವರು ಈ ಪ್ರಕ್ರಿಯೆಯಿಂದ ದೂರ ಉಳಿದಿರುವುದು ಪಕ್ಷದ ಒಳಗಿನ ಒಡಕನ್ನು ಎತ್ತಿ ತೋರಿಸುತ್ತಿದೆ. ವಿಯೆಟ್ನಾಂನಿಂದ ಜಗತ್ತಿನ ವಿದ್ಯಮಾನಗಳ ಬಗ್ಗೆ ಮಾತನಾಡುವ ರಾಹುಲ್, ದೆಹಲಿಯಲ್ಲಿರುವ ತಮ್ಮ ಅಳಿಯನ ಪರವಾಗಿ ಒಂದೇ ಒಂದು ಟ್ವೀಟ್ ಮಾಡದಿರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ. ಗಾಂಧಿ ಕುಟುಂಬದ ಈ ಅಂತರಂಗದ ಗುದ್ದಾಟ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.








