“ರೈತರಿಗೆ ನೆರವು ನೀಡುವ ವಿಷಯದಲ್ಲಿ ಹೊಣೆಗೇಡಿತನ ಪ್ರದರ್ಶಿಸಿರುವ ಕಾಂಗ್ರೆಸ್‌ಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ” ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಹರಿಹಾಯ್ದರು.
ಐದಾರು ತಿಂಗಳಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿರುವ ಸರ್ಕಾರ, ವಿಶೇಷ ಅಧಿವೇಶನ ನಡೆಸಿ ಪ್ರತಿ ರೈತ ಕುಟುಂಬಕ್ಕೆ ₹2,500 ಪರಿಹಾರ ಘೋಷಿಸಿತ್ತು. ಘೋಷಣೆ ಮಾಡಿ ಒಂದು ತಿಂಗಳು ಕಳೆದರೂ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಇದೀಗ ಪರಿಹಾರ ನೀಡಲು ಬರೋಬ್ಬರಿ 17 ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ರೈತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಅಧಿಕಾರದಲ್ಲಿರುವುದರ ಔಚಿತ್ಯವೇನು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನಿಸಿದರು.
ಮೂರು ದಿನಗಳ ವಿಶೇಷ ಅಧಿವೇಶನ ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಸರ್ಕಾರ, ಕೊನೆಗೆ ಪ್ರತಿ ಕುಟುಂಬಕ್ಕೆ ಕೇವಲ ₹2,500 ಪರಿಹಾರ ನೀಡುವುದಾಗಿ ಘೋಷಿಸಿತ್ತು. ಆದರೆ ಈಗ ಹಣ ಬಿಡುಗಡೆ ಮಾಡಲು 17 ಸೂತ್ರಗಳನ್ನು ರೂಪಿಸಿದೆ. ರೈತರಿಗೆ ಪರಿಹಾರ ನೀಡುವುದಕ್ಕಿಂತ ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದೇ ಸರ್ಕಾರದ ಉದ್ದೇಶವಾಗಿದೆ. ಒಂದು ಕುಟುಂಬಕ್ಕೆ ನೀಡುವ ಅಲ್ಪ ಪರಿಹಾರಕ್ಕೂ ಇಷ್ಟೊಂದು ಷರತ್ತು ವಿಧಿಸುವುದು ರೈತರನ್ನು ಅವಮಾನಿಸಿದಂತೆ ಎಂದರು.
ರೈತರಿಗೆ 17 ಷರತ್ತುಗಳ ಸಂಕಷ್ಟ
ಕಂದಾಯ ಇಲಾಖೆಯಲ್ಲಿರುವ ರೈತರ ಬ್ಯಾಂಕ್ ಖಾತೆ ವಿವರಗಳು, ಭೂ ದಾಖಲೆಗಳು ಹಾಗೂ ಇತರ ಮಾಹಿತಿಗಳು ಈಗಾಗಲೇ ಡಿಜಿಟಲ್ ವ್ಯವಸ್ಥೆಯಲ್ಲಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಫ್ರೂಟ್ಸ್ ತಂತ್ರಾಂಶದಲ್ಲೂ ರೈತರ ವಿವರಗಳಿವೆ. ಹೀಗಿರುವಾಗ ಮತ್ತೆ 17 ಷರತ್ತುಗಳನ್ನು ವಿಧಿಸುವ ಅಗತ್ಯವೇನಿದೆ? ರೈತರ ದಾಖಲೆಗಳನ್ನು ಪರಿಶೀಲಿಸುವುದು ಸರ್ಕಾರದ ಜವಾಬ್ದಾರಿಯೇ ಹೊರತು ರೈತರನ್ನು ಅಲೆದಾಡಿಸುವುದಲ್ಲ ಎಂದರು.
ಒಣಭೂಮಿ, ನೀರಾವರಿ ಭೂಮಿ, ಬಹು ವಾರ್ಷಿಕ ಬೆಳೆ ಸೇರಿದಂತೆ ವಿವಿಧ ವರ್ಗಗಳಾಗಿ ರೈತರನ್ನು ವಿಂಗಡಿಸಲಾಗಿದೆ. ಜಂಟಿ ಖಾತೆ, ಪೌತಿ ಖಾತೆ, ಭೂ ದಾಖಲೆಗಳಲ್ಲಿನ ವ್ಯತ್ಯಾಸ, ಬಗರ್‌ಹುಕುಂ ಸಾಗುವಳಿ ಜಮೀನು, ಕೃಷಿಯಿಂದ ಕೃಷಿಯೇತರ ಭೂಮಿಗೆ ಪರಿವರ್ತನೆಯಾದ ಜಮೀನು ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಪರಿಹಾರ ನಿರಾಕರಿಸುವ ವ್ಯವಸ್ಥೆ ರೂಪಿಸಲಾಗಿದೆ. ಎರಡು ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ ಕುಟುಂಬಗಳಿಗೆ ಪರಿಹಾರ ನೀಡುವುದಿಲ್ಲ ಎಂಬ ಮಿತಿಯನ್ನೂ ವಿಧಿಸಲಾಗಿದೆ. ಇಂತಹ ಅವೈಜ್ಞಾನಿಕ ನಿರ್ಧಾರಗಳಿಂದ ರೈತ ಸಮುದಾಯವನ್ನು ವಿಭಜಿಸುವ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದ ಅನೇಕ ರೈತರು 10ರಿಂದ 15 ಎಕರೆ ಒಣಭೂಮಿ ಹೊಂದಿದ್ದರೂ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಅಂತಹ ರೈತರನ್ನು ಪರಿಹಾರದಿಂದ ಹೊರಗಿಡುವುದು ಯಾವ ನ್ಯಾಯ? ಬಯೋಮೆಟ್ರಿಕ್ ದೃಢೀಕರಣ ಸೇರಿದಂತೆ ಮತ್ತಷ್ಟು ಷರತ್ತುಗಳನ್ನು ವಿಧಿಸಿರುವುದರಿಂದ ಪರಿಹಾರ ಪಡೆಯಲು ರೈತರು ಇನ್ನೆಷ್ಟು ತಿಂಗಳು ಕಾಯಬೇಕು? ಸುಮಾರು ₹1,250 ಕೋಟಿ ಪರಿಹಾರವನ್ನು ಒಂದೇ ಬಾರಿಗೆ ಡಿಬಿಟಿ ಮೂಲಕ ವರ್ಗಾಯಿಸಲು ಸಾಧ್ಯವಿದ್ದರೂ, ಕಂತುಗಳಲ್ಲಿ ಹಣ ಬಿಡುಗಡೆ ಮಾಡುವ ಮೂಲಕ ಸರ್ಕಾರ ತನ್ನ ಆರ್ಥಿಕ ಅಸಮರ್ಥತೆಯನ್ನು ಪ್ರದರ್ಶಿಸುತ್ತಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ವರ್ಷ ₹6,000 ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಅದಕ್ಕೆ 17 ಷರತ್ತುಗಳ ಅಗತ್ಯವಿಲ್ಲ. ರಾಜ್ಯ ಸರ್ಕಾರವೂ ಅದೇ ಮಾದರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿ, ಅರ್ಹ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ವರ್ಗಾವಣೆ ಮಾಡಬೇಕು. ರೈತರಿಗೆ ಭರವಸೆಗಳೂ ಬೇಡ, ಅಲೆದಾಟವೂ ಬೇಡ. ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 3,800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ದೇಶದಲ್ಲಿ ರೈತರ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನದಲ್ಲಿ ಇದೆ, ಈ ಧೋರಣೆ ಮುಂದುವರೆದರೆ ರಾಜ್ಯವು ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲಿ ಮೊದಲ ಸ್ಥಾನಕ್ಕೆ ಹೋಗಲಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ಧೋರಣೆ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ. ರೈತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಸರ್ಕಾರವೇ ಅವರ ಸಂಕಷ್ಟಕ್ಕೆ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.








