ಮೂರು ವರ್ಷಗಳಿಂದ ಸ್ಥಗಿತಗೊಂಡ ಮಾಸಾಶನ; ಇ-ಕೆವೈಸಿ ನೆಪದಲ್ಲಿ ಅಸಹಾಯಕ ಕುಟುಂಬಕ್ಕೆ ಅಧಿಕಾರಿಗಳ ಕಿರುಕುಳ, ತಕ್ಷಣ ಮಾಸಾಶನ ಮರುಸ್ಥಾಪನೆಗೆ ಆಗ್ರಹ
ಬೆಂಗಳೂರು: ಒಬ್ಬ ಅಂಗವಿಕಲ ವ್ಯಕ್ತಿಗೆ ಸಿಗಬೇಕಾದ ಕನಿಷ್ಠ ₹1,400 ಮಾಸಾಶನಕ್ಕಾಗಿ ವೃದ್ಧ ತಂದೆ-ತಾಯಿ ತಮ್ಮ 42 ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತು ಸರ್ಕಾರಿ ಕಚೇರಿಗಳಿಗೆ ಅಲೆಯುವ ದುಸ್ಥಿತಿ ನಿರ್ಮಾಣವಾಗಿದೆ. ಇಂತಹ ಅಸಹಾಯಕ ಕುಟುಂಬದ ಕಣ್ಣೀರು ಒರೆಸಲಾಗದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಯಾವುದೂ ಇಲ್ಲವೇ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ತಾಲೂಕಿನ ಕನಕಾಪುರದ ರಾಜಪ್ಪ ಅವರ ಕುಟುಂಬದ ಗೋಳು ಹೃದಯ ವಿದ್ರಾವಕವಾಗಿದೆ. ಹುಟ್ಟಿನಿಂದಲೇ ಅಂಗವೈಕಲ್ಯ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ 42 ವರ್ಷದ ಮಗನಿಗೆ ಸಿಗಬೇಕಾದ ಮಾಸಾಶನಕ್ಕಾಗಿ ವೃದ್ಧ ತಂದೆ-ತಾಯಿ ಕಳೆದ ಮೂರು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. 2010ರಿಂದ ನಿರಂತರವಾಗಿ ಬರುತ್ತಿದ್ದ ಮಾಸಾಶನವನ್ನು 2023ರಲ್ಲಿ ಸ್ಥಗಿತಗೊಳಿಸಲಾಗಿದೆ. ಅಂದು ₹1,000 ಇದ್ದ ಮಾಸಾಶನ ಇಂದು ₹1,400ಕ್ಕೆ ಏರಿಕೆಯಾಗಿದ್ದರೂ, ಆ ಹಣ ಪಡೆಯಲು ಈ ಕುಟುಂಬ ಪರದಾಡುವಂತಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ.
ಬೆರಳಚ್ಚು, ಕಣ್ಣಿನ ಸಮಸ್ಯೆ ಹಾಗೂ ಇ-ಕೆವೈಸಿ ಸೇರಿದಂತೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಮಾಸಾಶನ ಸ್ಥಗಿತಗೊಳಿಸಿರುವ ಅಧಿಕಾರಿಗಳಿಗೆ, ಇಂತಹ ತೀವ್ರ ಅಂಗವೈಕಲ್ಯ ಹೊಂದಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಕನಿಷ್ಠ ಮಾನವೀಯತೆಯೂ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
42 ವರ್ಷದ ಅಂಗವಿಕಲ ಮಗನಿಗೆ ಸಿಗಬೇಕಿರುವುದು ಕೇವಲ ₹1,400 ಮಾಸಾಶನ. ಆದರೆ ವೃದ್ಧ ಪೋಷಕರು ಮಗನನ್ನು ಹೆಗಲ ಮೇಲೆ ಹೊತ್ತು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳ ಪಾಲಿಗೆ ಮೂರು ವರ್ಷಗಳಾದರೂ ಬಗೆಹರಿಯದ ಇ-ಕೆವೈಸಿ ಸಮಸ್ಯೆ, ಕುಟುಂಬದ ಪಾಲಿಗೆ ಬದುಕಿನ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರಕ್ಕೆ ಸಾಧನಾ ಸಮಾವೇಶಗಳು ಹಾಗೂ ಸಚಿವರ ಬಂಗಲೆಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಹಣವಿದೆ. ಆದರೆ ಒಬ್ಬ ಅಸಹಾಯಕ ಅಂಗವಿಕಲನಿಗೆ ತಿಂಗಳಿಗೆ ₹1,400 ಮಾಸಾಶನ ತಲುಪಿಸಲು ಮಾತ್ರ ಸಾಧ್ಯವಾಗುತ್ತಿಲ್ಲವೇ? ಇದೇನಾ ನಿಮ್ಮ ಪ್ರಜಾಸೇವೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಅಂಗವಿಕಲರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದಲ್ಲ ಸರ್ಕಾರದ ಕೆಲಸ. ಅವರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವುದು ಸರ್ಕಾರದ ಕರ್ತವ್ಯ. ಬಡವರು, ಅಂಗವಿಕಲರು ಮತ್ತು ವೃದ್ಧರ ಬದುಕಿಗೆ ಆಸರೆಯಾಗಬೇಕಾದ ಮಾಸಾಶನವನ್ನೇ ಹೀಗೆ ಸತಾಯಿಸಿ ಸ್ಥಗಿತಗೊಳಿಸುವುದು ಯಾವ ರೀತಿಯ ಸಾಮಾಜಿಕ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ರಾಜಪ್ಪ ಅವರ ಸ್ಥಗಿತಗೊಂಡಿರುವ ಮಾಸಾಶನವನ್ನು ಮರುಸ್ಥಾಪಿಸಿ, ಬಾಕಿ ಹಣ ಬಿಡುಗಡೆ ಮಾಡಬೇಕು. ಇಂತಹ ಅಸಹಾಯಕ ಫಲಾನುಭವಿಗಳಿಗೆ ಇ-ಕೆವೈಸಿ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.
ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವುದನ್ನು ಬಿಟ್ಟು, ಅಸಹಾಯಕರ ಬದುಕಿನಲ್ಲಿ ಬೆಳಕು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲಿ. ಅದೇ ನಿಜವಾದ ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತ ಎಂದು ಅವರು ಹೇಳಿದ್ದಾರೆ.







