ಚುನಾವಣೆಗೂ ಮುನ್ನ ಮನೆ ಬಾಗಿಲಿಗೆ ತೆರಳಿ ಗ್ಯಾರಂಟಿ ಕಾರ್ಡ್ ಹಂಚಿದವರು ಈಗ ನ್ಯಾಯಾಲಯದ ಹಿಂದೆ ಅಡಗಿದ್ದಾರೆ; ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿದೆಯೇ?
ಬೆಂಗಳೂರು: ಚುನಾವಣೆಗೂ ಮುನ್ನ ಮಹಿಳೆಯರ ಮನೆ ಬಾಗಿಲಿಗೆ ತೆರಳಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ₹2,000 ನೀಡುವುದಾಗಿ ಭರವಸೆ ನೀಡಿ, ಅಧಿಕಾರಕ್ಕೆ ಬಂದ ಬಳಿಕ ಅದೇ ಹಣ ಪಡೆಯುವುದು ಫಲಾನುಭವಿಗಳ ಕಾನೂನುಬದ್ಧ ಹಕ್ಕಲ್ಲ ಎಂದು ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿರುವ ಕಾಂಗ್ರೆಸ್ ಸರ್ಕಾರದ ನಡೆ ದ್ವಿಮುಖ ನೀತಿಯ ಪರಮಾವಧಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಚುನಾವಣೆಗೂ ಮುನ್ನ ‘ಗ್ಯಾರಂಟಿ ನಿಮ್ಮ ಹಕ್ಕು, ನಿಮ್ಮ ಮನೆ ಬಾಗಿಲಿಗೆ ಹಣ’ ಎಂದು ಪ್ರಚಾರ ಮಾಡಿದ ಕಾಂಗ್ರೆಸ್ ನಾಯಕರು, ಇದೀಗ ಗೃಹಲಕ್ಷ್ಮಿ ಯೋಜನೆಯ ಹಣ ಕೇಳಿದರೆ ಕಾನೂನಿನ ಹಿಂದೆ ಅಡಗಿಕೊಳ್ಳುತ್ತಿದ್ದಾರೆ. ಹೈಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವುದು ಫಲಾನುಭವಿಗಳ ಕಾನೂನುಬದ್ಧ ಹಕ್ಕಲ್ಲ ಎಂದು ರಾಜ್ಯ ಸರ್ಕಾರವೇ ಹೇಳಿದೆ. ಅಲ್ಲದೆ, ಖಜಾನೆಯಲ್ಲಿ ಹಣದ ಕೊರತೆಯನ್ನೂ ನೆಪವಾಗಿ ಮುಂದಿಟ್ಟಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಅಧಿಕಾರಕ್ಕಾಗಿ ಗ್ಯಾರಂಟಿಗಳನ್ನು ಘೋಷಿಸುವಾಗ ರಾಜ್ಯದ ಆರ್ಥಿಕ ಸಾಮರ್ಥ್ಯದ ಅರಿವು ಇರಲಿಲ್ಲವೇ? 1.26 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೀಡುವುದಾಗಿ ಭರವಸೆ ನೀಡಿದ್ದು ಏಕೆ? ಈಗ ಮಹಿಳೆಯರಿಗೆ ಹಣ ಪಾವತಿಸುವ ಬದಲು ನ್ಯಾಯಾಲಯದಲ್ಲಿ ಅವರ ಹಕ್ಕನ್ನೇ ಪ್ರಶ್ನಿಸುತ್ತಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಮತಗಳಿಗಾಗಿ ಮಹಿಳೆಯರ ಮನೆ ಬಾಗಿಲಿಗೆ ಗ್ಯಾರಂಟಿ ಕಾರ್ಡ್ ಹಿಡಿದು ಬಂದ ಕಾಂಗ್ರೆಸ್ ನಾಯಕರು, ಇಂದು ಅವರ ಪಾಲಿನ ಹಣ ಕೇಳಿದಾಗ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಗ್ಯಾರಂಟಿ ಘೋಷಿಸುವಾಗ ಇದ್ದ ಬದ್ಧತೆ ಈಗ ಎಲ್ಲಿಗೆ ಹೋಯಿತು? ಮಹಿಳೆಯರಿಗೆ ನೀಡಿದ ಭರವಸೆ ಈಡೇರಿಸುವುದು ನಿಮ್ಮ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರ ಮತ ಬೇಕಾದಾಗ ಗ್ಯಾರಂಟಿಯನ್ನು ಅವರ ಹಕ್ಕು ಎಂದು ಬಿಂಬಿಸಿ, ಹಣ ನೀಡುವ ಸಂದರ್ಭದಲ್ಲಿ ಅವರಿಗೇ ಕಾನೂನುಬದ್ಧ ಹಕ್ಕಿಲ್ಲ ಎನ್ನುವುದು ಕಾಂಗ್ರೆಸ್ನ ದ್ವಿಮುಖ ನೀತಿಯಾಗಿದೆ. ಗೃಹಲಕ್ಷ್ಮಿಯರಿಗೆ ಬೇಕಿರುವುದು ನ್ಯಾಯಾಲಯಕ್ಕೆ ಸಲ್ಲಿಸುವ ಪ್ರಮಾಣಪತ್ರಗಳಲ್ಲ, ಅವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಜಮೆಯಾಗಬೇಕಾದ ₹2,000 ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿದೆಯೇ ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.








