11 ತಿಂಗಳಿಂದ 45 ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಷಿಪ್ ಬಿಡುಗಡೆ ಇಲ್ಲ; ವಿದ್ಯಾರ್ಥಿಗಳು, ರೈತರು, ಸಾರಿಗೆ ನೌಕರರ ಬದುಕಿನ ಜೊತೆ ಸರ್ಕಾರ ಚೆಲ್ಲಾಟ
ಬೆಂಗಳೂರು: ರಾಜ್ಯದ ಖಜಾನೆಯನ್ನು ಸಂಪೂರ್ಣ ಖಾಲಿ ಮಾಡಿ, ಕರ್ನಾಟಕವನ್ನು ಆರ್ಥಿಕ ದಿವಾಳಿತನದ ಅಂಚಿಗೆ ತಳ್ಳಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕ ಅರ್ಹತೆಯೇ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 45 ಸಂಶೋಧನಾ ವಿದ್ಯಾರ್ಥಿಗಳಿಗೆ ಕಳೆದ 11 ತಿಂಗಳಿಂದ ಫೆಲೋಷಿಪ್ ಹಣ ಬಿಡುಗಡೆ ಮಾಡದೆ, ಬಡ ವಿದ್ಯಾರ್ಥಿಗಳನ್ನು ಸಾಲದ ಸುಳಿಗೆ ಸಿಲುಕಿಸಲಾಗಿದೆ. ಆರ್ಥಿಕ ಸಂಕಷ್ಟದಿಂದ ವಿದ್ಯಾರ್ಥಿಗಳು ಆತ್ಮಹತ್ಯೆಯ ಆಲೋಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಅಮಾನವೀಯ ಆಡಳಿತಕ್ಕೆ ಕನಿಷ್ಠ ಮಾನ-ಮರ್ಯಾದೆಯಾದರೂ ಇದೆಯೇ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಶೋಕ್ ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳು, ರೈತರು, ಸಾರಿಗೆ ನೌಕರರು ಸೇರಿದಂತೆ ಸಮಾಜದ ವಿವಿಧ ವರ್ಗದ ಜನರನ್ನು ಕಾಂಗ್ರೆಸ್ ಸರ್ಕಾರದ ದುರಾಡಳಿತ ಸಂಕಷ್ಟಕ್ಕೆ ದೂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರದ ಬಳಿ ಜನರಿಗೆ ನೀಡಬೇಕಾದ ಹಣವನ್ನೂ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿಯಾಗಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿರುವ ಅಶೋಕ್, ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ. ಸಾರಿಗೆ ನಿಗಮಗಳ ಬಾಕಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ನಿಗಮಗಳ ಬಾಕಿ ಉಳಿದಿದೆ. ರೈತರ ಬರ ಪರಿಹಾರ ಬಿಡುಗಡೆಗೆ ಹಣವಿಲ್ಲ. ಸರ್ಕಾರಿ ಬಸ್ಸುಗಳಿಗೆ ಡೀಸೆಲ್ ಹಾಕಿಸಲೂ ಹಣದ ಕೊರತೆ ಎದುರಾಗಿದೆ. ಇದೀಗ ಸಂಶೋಧನಾ ವಿದ್ಯಾರ್ಥಿಗಳ ಫೆಲೋಷಿಪ್ ಕೂಡ ಸ್ಥಗಿತಗೊಂಡಿದೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ರಾಜ್ಯದ ಎಲ್ಲ ವಲಯಗಳ ಅಭಿವೃದ್ಧಿಗೆ, ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾಗೂ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಖಜಾನೆಯಲ್ಲಿ ಹಣವಿಲ್ಲ ಎಂದಾದರೆ, ತೆರಿಗೆ ಹೆಚ್ಚಳ ಮತ್ತು ಬೆಲೆ ಏರಿಕೆಯ ಮೂಲಕ ಸಂಗ್ರಹವಾಗುತ್ತಿರುವ ಕೋಟ್ಯಂತರ ರೂಪಾಯಿ ಹಣ ಎಲ್ಲಿಗೆ ಹೋಗುತ್ತಿದೆ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಬಡವರ ಬದುಕಿನ ಮೇಲೆ ಹೊರೆ ಹಾಕಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿ, ರೈತರು ಹಾಗೂ ಸಾರಿಗೆ ನೌಕರರನ್ನು ಸಂಕಷ್ಟಕ್ಕೆ ತಳ್ಳಿರುವ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಜನರೇ ಉತ್ತರ ನೀಡಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿರುವ ಸರ್ಕಾರ ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲದ ಮುಖ್ಯಮಂತ್ರಿ ರಾಜೀನಾಮೆ ನೀಡಿ ಮನೆಗೆ ತೆರಳಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.







