ವಿಧಾನಸೌಧ, ವಿಕಾಸಸೌಧದಲ್ಲೇ ಕಮಿಷನ್ ದಂಧೆ; ಕ್ಯಾಂಟೀನ್ ಗುತ್ತಿಗೆದಾರರಿಂದ ₹10 ಲಕ್ಷ ಲಂಚ ವಸೂಲಿ ಆರೋಪ
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಪೇಸಿಎಂ’ ಅಭಿಯಾನ ನಡೆಸಿ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ ಪಕ್ಷ, ಈಗ ತನ್ನದೇ ಸರ್ಕಾರದಲ್ಲಿ ‘ಫೋನ್ ಪೇ ಕಮಿಷನ್’ ವ್ಯವಹಾರ ನಡೆಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ವಿಧಾನಸೌಧ, ವಿಕಾಸಸೌಧ ಮತ್ತು ಎಂ.ಎಸ್. ಬಿಲ್ಡಿಂಗ್ನಂತಹ ಆಡಳಿತದ ಶಕ್ತಿಕೇಂದ್ರಗಳಲ್ಲೇ ಕಮಿಷನ್ ದಂಧೆ ನಡೆಯುತ್ತಿದೆ ಎಂದು ದೂರಿದ್ದಾರೆ. ಡಿಬಿಟಿ ಮಾದರಿಯಲ್ಲೇ ಡಿಸಿಟಿ (Direct Commission Transfer) ಎಂಬ ಹೊಸ ಡಿಜಿಟಲ್ ಭ್ರಷ್ಟಾಚಾರ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದೆಯೇ ಎಂದು ವ್ಯಂಗ್ಯವಾಡಿದ್ದಾರೆ.
ಕ್ಯಾಂಟೀನ್ ಗುತ್ತಿಗೆದಾರರಿಂದಲೂ ಫೋನ್ ಪೇ ಮೂಲಕ ₹10 ಲಕ್ಷ ಲಂಚ ವಸೂಲಿ ಮಾಡುವ ಮಟ್ಟಕ್ಕೆ ಸರ್ಕಾರದ ಭ್ರಷ್ಟಾಚಾರ ತಲುಪಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ ದೊಡ್ಡ ದೊಡ್ಡ ಗುತ್ತಿಗೆಗಳಲ್ಲಿ ನಡೆಯುತ್ತಿರುವ ಕಮಿಷನ್ ವ್ಯವಹಾರ ಎಷ್ಟಿರಬಹುದು ಎಂದು ಜನರೇ ಊಹಿಸಿಕೊಳ್ಳಲಿ ಎಂದು ಆರ್. ಅಶೋಕ್ ಹೇಳಿದ್ದಾರೆ.
ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಹಣವಿಲ್ಲ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ, ಡೀಸೆಲ್ ಹಾಕಲೂ ದುಡ್ಡಿಲ್ಲ ಎಂದು ಹೇಳುವ ಸರ್ಕಾರ, ಕಷ್ಟಪಟ್ಟು ದುಡಿಯುವ ಗುತ್ತಿಗೆದಾರರಿಂದ ಕಮಿಷನ್ ವಸೂಲಿ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಲಂಚಕ್ಕಾಗಿ ಪದೇಪದೇ ಬೇಡಿಕೆ ಇಡುವುದರ ಜೊತೆಗೆ ಬೆದರಿಕೆ ಹಾಕಿದ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರು ತಿರುಗಿಬಿದ್ದಿದ್ದಾರೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸಭಾಪತಿಗಳ ಆಪ್ತ ಕಾರ್ಯದರ್ಶಿಗೆ ವಕೀಲರ ಮೂಲಕ ನೋಟಿಸ್ ನೀಡಿರುವುದಾಗಿ ಆರ್. ಅಶೋಕ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು, ‘ಯಾರಾದರೂ ಲಂಚ ಕೇಳಿದರೆ ನೇರವಾಗಿ ನನಗೆ ಕರೆ ಮಾಡಿ’ ಎಂದು ಹೇಳುತ್ತಾರೆ. ಆದರೆ ಅವರದೇ ಸರ್ಕಾರದ ಅಧಿಕಾರಿಗಳು ‘ನೇರವಾಗಿ ಫೋನ್ ಪೇ ಮಾಡಿ’ ಎನ್ನುತ್ತಿದ್ದಾರೆ. ಮುಖ್ಯಮಂತ್ರಿಗಳೇ ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲೇ ಕಮಿಷನ್ ದಂಧೆ ನಡೆಯುತ್ತಿರುವುದು ಅವರ ಗಮನಕ್ಕೆ ಬಂದಿಲ್ಲವೇ? ಅಥವಾ ಇದಕ್ಕೂ ಅವರ ಅನುಮತಿ ಇದೆಯೇ ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಬೊಕ್ಕಸದಲ್ಲಿ ಹಣವಿಲ್ಲ ಎಂದು ರೈತರ ಮುಂದೆ ಹೇಳುವ ಮುಖ್ಯಮಂತ್ರಿಗಳಿಗೆ, ಅಧಿಕಾರಿಗಳು ಕಮಿಷನ್ ಪಡೆಯಬಾರದು ಎಂದು ಸೂಚನೆ ನೀಡುವ ಧೈರ್ಯವೂ ಇಲ್ಲವೇ? ಹಾಗಾದರೆ ಅಧಿಕಾರದಲ್ಲಿ ಮುಂದುವರಿಯುವುದಾದರೂ ಏಕೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕೂಡಲೇ ಎಲ್ಲ ಇಲಾಖೆಗಳಲ್ಲೂ ನಡೆಯುತ್ತಿರುವ ಕಮಿಷನ್ ದಂಧೆಯನ್ನು ನಿಲ್ಲಿಸಿ, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಇಲ್ಲವಾದರೆ ‘ಫೋನ್ ಪೇ ಸಿಎಂ’ ಎಂದು ಘೋಷಿಸಿಕೊಳ್ಳಲಿ ಎಂದು ಆರ್. ಅಶೋಕ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.







