ಅಮೂಲ್ ಮತ್ತು ಮದರ್ ಡೇರಿ ಹಾಲಿನ ದರ ಏರಿಕೆ ಬೆನ್ನಲ್ಲೇ ಇದೀಗ ಪಂಜಾಬ್ನ ಪ್ರಮುಖ ಸಹಕಾರಿ ಹಾಲಿನ ಬ್ರ್ಯಾಂಡ್ ‘ವೆರ್ಕಾ’ (Verka) ಕೂಡ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ಪಂಜಾಬ್ ಸ್ಟೇಟ್ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಫೆಡರೇಷನ್ ತನ್ನ ವಿವಿಧ ಮಾದರಿಯ ಪೌಚ್ ಹಾಲಿನ ದರವನ್ನು ₹1ರಿಂದ ₹8ರವರೆಗೆ ಹೆಚ್ಚಿಸಿದೆ. ಪರಿಷ್ಕೃತ ದರಗಳು ನವೆಂಬರ್ 13ರ ಬೆಳಗ್ಗೆಯಿಂದಲೇ ಜಾರಿಗೆ ಬಂದಿವೆ.
ಈ ದರ ಏರಿಕೆ ಪಂಜಾಬ್, ಚಂಡೀಗಢ, ಪಂಚಕುಲ, ಮೊಹಾಲಿ, ಕಲ್ಕಾ, ರೂಪನಗರ ಹಾಗೂ ದೆಹಲಿ-ಎನ್ಸಿಆರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಅನ್ವಯಿಸುತ್ತದೆ.
ಒಂದು ಲೀಟರ್ ಫುಲ್ ಕ್ರೀಮ್ ಹಾಲಿಗೆ ₹4 ಹೆಚ್ಚಳ
ವೆರ್ಕಾದ ಹೊಸ ದರಪಟ್ಟಿಯ ಪ್ರಕಾರ, ಒಂದು ಲೀಟರ್ ಫುಲ್ ಕ್ರೀಮ್ ಹಾಲಿನ ಬೆಲೆ ₹72ರಿಂದ ₹76ಕ್ಕೆ ಏರಿಕೆಯಾಗಿದೆ. ಸ್ಟ್ಯಾಂಡರ್ಡ್ ಹಾಲಿನ ಬೆಲೆ ₹65ರಿಂದ ₹69ಕ್ಕೆ ಹೆಚ್ಚಳವಾಗಿದೆ.
1.5 ಲೀಟರ್ ಫುಲ್ ಕ್ರೀಮ್ ಹಾಲಿನ ಬೆಲೆ ₹106ರಿಂದ ₹112ಕ್ಕೆ ಹಾಗೂ ಹಸುವಿನ ಹಾಲಿನ ಬೆಲೆ ₹90ರಿಂದ ₹96ಕ್ಕೆ ಏರಿಕೆಯಾಗಿದೆ.
ಹಾಲಿನ ಪ್ಯಾಕೆಟ್ ಪ್ರಮಾಣವೂ ಕಡಿತ
ಬೆಲೆ ಏರಿಕೆಯ ಜೊತೆಗೆ ಕೆಲವು ಹಾಲಿನ ಪ್ಯಾಕೆಟ್ಗಳ ಪ್ರಮಾಣವನ್ನು ಕಡಿಮೆ ಮಾಡಲು ವೆರ್ಕಾ ನಿರ್ಧರಿಸಿದೆ. ಪ್ರಸ್ತುತ 350 ಮಿ.ಲೀ. ಟೋನ್ಡ್ ಹಾಲಿನ ಪ್ಯಾಕೆಟ್ ಅನ್ನು ಮುಂದಿನ ದಿನಗಳಲ್ಲಿ 320 ಮಿ.ಲೀ.ಗೆ ಇಳಿಸಲಾಗುತ್ತದೆ.
ಅದೇ ರೀತಿ, 450 ಮಿ.ಲೀ. ಸ್ಟ್ಯಾಂಡರ್ಡ್ ಹಾಲಿನ ಪ್ಯಾಕೆಟ್ ಪ್ರಮಾಣವನ್ನು 430 ಮಿ.ಲೀ.ಗೆ ಕಡಿತಗೊಳಿಸಲಾಗುತ್ತದೆ. ಈಗಿರುವ ಪ್ಯಾಕಿಂಗ್ ಫಿಲ್ಮ್ ಸಂಗ್ರಹ ಮುಗಿದ ಬಳಿಕ ಈ ಬದಲಾವಣೆ ಜಾರಿಗೆ ಬರಲಿದೆ.
ಆದರೆ 180 ಮಿ.ಲೀ. ಡಬಲ್ ಟೋನ್ಡ್ ಹಾಲು ಮತ್ತು 350 ಮಿ.ಲೀ. ಟೋನ್ಡ್ ಹಾಲಿನ ಪ್ರಸ್ತುತ ಬೆಲೆಯಲ್ಲಿ ತಕ್ಷಣ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಫೆಡರೇಷನ್ ತಿಳಿಸಿದೆ.
ಈ ವರ್ಷ ಎರಡನೇ ಬಾರಿ ದರ ಏರಿಕೆ
ವೆರ್ಕಾ ಹಾಲಿನ ದರವನ್ನು ಒಂದು ವರ್ಷದೊಳಗೆ ಎರಡನೇ ಬಾರಿಗೆ ಹೆಚ್ಚಿಸಲಾಗಿದೆ. ಈ ಹಿಂದೆ ಮೇ ತಿಂಗಳಲ್ಲಿ ಪ್ರತಿ ಲೀಟರ್ಗೆ ₹2ರಷ್ಟು ದರ ಏರಿಕೆ ಮಾಡಲಾಗಿತ್ತು. ಇದೀಗ ವಿವಿಧ ಮಾದರಿ ಮತ್ತು ಪ್ಯಾಕೆಟ್ ಗಾತ್ರಗಳಿಗೆ ಅನುಗುಣವಾಗಿ ₹1ರಿಂದ ₹8ರವರೆಗೆ ಹೆಚ್ಚಳ ಮಾಡಲಾಗಿದೆ.
ಪಂಜಾಬ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತರ ಪ್ರಮುಖ ಹಾಲಿನ ಬ್ರ್ಯಾಂಡ್ಗಳ ದರಗಳನ್ನೂ ಪರಿಗಣಿಸಿ ನಡೆದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಕರ್ನಾಟಕದ ಗ್ರಾಹಕರಿಗೆ ಅನ್ವಯವಾಗುತ್ತದೆಯೇ?
ವೆರ್ಕಾದ ಈ ದರ ಏರಿಕೆ ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ. ಇದು ಮುಖ್ಯವಾಗಿ ಪಂಜಾಬ್, ಚಂಡೀಗಢ ಮತ್ತು ದೆಹಲಿ-ಎನ್ಸಿಆರ್ ಸೇರಿದಂತೆ ನಿರ್ದಿಷ್ಟ ಉತ್ತರ ಭಾರತದ ಮಾರುಕಟ್ಟೆಗಳಿಗೆ ಮಾತ್ರ ಅನ್ವಯಿಸುತ್ತದೆ.
ಆದರೆ ಅಮೂಲ್ ಮತ್ತು ಮದರ್ ಡೇರಿ ದರ ಏರಿಕೆಯ ಬೆನ್ನಲ್ಲೇ ವೆರ್ಕಾ ಕೂಡ ಬೆಲೆ ಹೆಚ್ಚಿಸಿರುವುದು ದೇಶದ ಹಾಲಿನ ಮಾರುಕಟ್ಟೆಯಲ್ಲಿ ದರ ಪರಿಷ್ಕರಣೆಯ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.








