ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ, ಕನ್ನಡದ ಯಶ್ ಹಾಗೂ ರವಿ ದುಬೆ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಬರೋಬ್ಬರಿ 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಕುರಿತು ಬಾಲಿವುಡ್ನ ಹಿರಿಯ ನಟ ಮುಖೇಶ್ ಖನ್ನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಈ ಮಹಾಕಾವ್ಯವನ್ನು ಪ್ರೇಕ್ಷಕರಿಗೆ ತಲುಪಿಸಲು ಇಷ್ಟೊಂದು ಬೃಹತ್ ಪ್ರಮಾಣದ ಹಣಕಾಸಿನ ಹೂಡಿಕೆಯ ಅಗತ್ಯವೇ ಇಲ್ಲ ಎಂದು ಪ್ರತಿಪಾದಿಸಿರುವ ಅವರು, ಇಂತಹ ಭಾರೀ ವೆಚ್ಚವನ್ನು ಕಂಪನಿಯ ಹಣದ ಪೋಲು ಎಂದು ಕಟುವಾಗಿ ಟೀಕಿಸಿದ್ದಾರೆ.
ಪೌರಾಣಿಕ ಹಾಗೂ ಧಾರ್ಮಿಕ ಗ್ರಂಥಗಳನ್ನು ಆಧರಿಸಿ ಸಿನಿಮಾ ನಿರ್ಮಿಸುವ ನಿರ್ದೇಶಕರಿಗೆ ಹೆಚ್ಚಿನ ಸಾಮಾಜಿಕ ಜವಾಬ್ದಾರಿ ಇರಬೇಕು. ದೇಶದ ಕೋಟ್ಯಂತರ ಜನರ ಭಾವನೆ ಮತ್ತು ಶ್ರದ್ಧಾ ನಂಬಿಕೆಗಳಿಗೆ ನೇರವಾಗಿ ಸಂಬಂಧಿಸಿದ ಇಂತಹ ಪವಿತ್ರ ಕಥೆಗಳನ್ನು ತೆರೆಗೆ ತರುವಾಗ ಸೃಜನಾತ್ಮಕ ಸ್ವಾತಂತ್ರ್ಯದ ಹೆಸರಿನಲ್ಲಿ ಅನಗತ್ಯ ಬದಲಾವಣೆಗಳನ್ನು ಮಾಡಬಾರದು ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಾವಿರ ಕೋಟಿ ಗಳಿಕೆ ಮುಖ್ಯವಲ್ಲ, ಕಥೆಯಲ್ಲಿ ಸಾವಿರ ರೂಪಾಯಿಯ ಸುಳ್ಳು ಸೇರಿಸಬಾರದು!
ಒಂದು ಪೌರಾಣಿಕ ಸಿನಿಮಾದ ಬಾಕ್ಸ್ ಆಫೀಸ್ ಆರ್ಥಿಕ ಯಶಸ್ಸಿಗಿಂತಲೂ ಮೂಲ ಕಥೆಗೆ ಎಷ್ಟರಮಟ್ಟಿಗೆ ನ್ಯಾಯ ಒದಗಿಸಲಾಗಿದೆ ಎಂಬುದೇ ಅತ್ಯಂತ ಮುಖ್ಯ ಎಂದು ಮುಖೇಶ್ ಖನ್ನಾ ಅಭಿಪ್ರಾಯಪಟ್ಟಿದ್ದಾರೆ. ನೀವು ಗಲ್ಲಾಪೆಟ್ಟಿಗೆಯಲ್ಲಿ ಸಾವಿರ ಕೋಟಿ ರೂಪಾಯಿ ಗಳಿಸಿದ್ದೀರಾ ಎಂಬುದು ನನಗೆ ಮುಖ್ಯವಲ್ಲ. ಆದರೆ, ಮೂಲ ಕಥೆಯಲ್ಲಿ ಸಾವಿರ ರೂಪಾಯಿಯಷ್ಟು ಸತ್ಯವನ್ನು ಮರೆಮಾಚಿದ್ದೀರಾ ಅಥವಾ ಸಾವಿರ ರೂಪಾಯಿಯಷ್ಟು ಸುಳ್ಳನ್ನು ಹೊಸದಾಗಿ ಸೇರಿಸಿದ್ದೀರಾ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಏಕೆಂದರೆ ಇದು ಸಾಮಾನ್ಯ ಕಾಲ್ಪನಿಕ ಕಥೆಯಲ್ಲ, ಬದಲಾಗಿ ರಾಮಾಯಣದ ಪುಣ್ಯಕಥೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಾಮಾಯಣ ಮತ್ತು ಮಹಾಭಾರತ ಎಂಬ ಎರಡು ಮಹಾನ್ ಗ್ರಂಥಗಳಿವೆ. ಅವುಗಳನ್ನು ಸಿನಿಮಾ ಮಾಡಲು ಮುಟ್ಟುವಾಗ ನಿರ್ಮಾಪಕ ಹಾಗೂ ನಿರ್ದೇಶಕರ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಈ ಮಹಾಗ್ರಂಥಗಳನ್ನು ತಮ್ಮಿಷ್ಟದಂತೆ ತಿರುಚಲು ಸಾಧ್ಯವಿಲ್ಲ ಎಂದು ಅವರು ಗುಡುಗಿದ್ದಾರೆ.
ಇದೇ ವೇಳೆ ಕಾಲ್ಪನಿಕ ಕಥೆಗಳಿಗೂ ಹಾಗೂ ಪೌರಾಣಿಕ ಮಹಾಕಾವ್ಯಗಳಿಗೂ ಇರುವ ಮೂಲಭೂತ ವ್ಯತ್ಯಾಸವನ್ನು ಬಿಡಿಸಿಟ್ಟ ಅವರು, ಬಾಹುಬಲಿ ಕೂಡ ಒಂದು ಅದ್ಭುತ ಸಿನಿಮಾ ಮತ್ತು ಅದು ತುಂಬಾ ಚೆನ್ನಾಗಿ ಮೂಡಿಬಂದಿತ್ತು. ಅಂತಹ ಸಿನಿಮಾಕ್ಕೆ ನೀವು ಸಾವಿರ ಕೋಟಿಯಲ್ಲ, ಬೇಕಿದ್ದರೆ 50,000 ಕೋಟಿ ರೂಪಾಯಿ ಖರ್ಚು ಮಾಡಬಹುದು. ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಬಾಹುಬಲಿ ಒಂದು ಕಾಲ್ಪನಿಕ ಕಥೆಯಾಗಿದ್ದು, ಅಲ್ಲಿ ನಿರ್ದೇಶಕರಿಗೆ ಸಂಪೂರ್ಣ ಸೃಜನಾತ್ಮಕ ಸ್ವಾತಂತ್ರ್ಯವಿರುತ್ತದೆ. ಆದರೆ ರಾಮಾಯಣದ ವಿಚಾರದಲ್ಲಿ ಆ ರೀತಿ ಸ್ವಾತಂತ್ರ್ಯ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2 ಕೋಟಿಯ ಹನುಮಾನ್ ಅಂಶ್ ಗೆದ್ದಿಲ್ಲವೇ? ರಾಮಾಯಣದ ಕಥೆ ನೀರಸವಾಗಿಲ್ಲ!
ಚಿತ್ರಕಥೆ ಗಟ್ಟಿಯಾಗಿದ್ದರೆ ಕಡಿಮೆ ಬಜೆಟ್ನಲ್ಲೂ ಅತ್ಯುತ್ತಮ ಸಿನಿಮಾ ನಿರ್ಮಿಸಿ ಗೆಲ್ಲಬಹುದು ಎಂಬುದನ್ನು ಒತ್ತಿ ಹೇಳಿದ ಮುಖೇಶ್ ಖನ್ನಾ, ರಾಮಾಯಣ ಸಿನಿಮಾ ಮಾಡಲು 4,000 ಕೋಟಿ ರೂಪಾಯಿ ಖರ್ಚು ಮಾಡಲೇಬೇಕು ಎಂಬ ನಿಯಮವೇನಿಲ್ಲ ಎಂದಿದ್ದಾರೆ. ಹನುಮಾನ್ ಅಂಶ್ ಎಂಬ ಚಲನಚಿತ್ರವು ಕೇವಲ 2 ಕೋಟಿ ರೂಪಾಯಿಗಳ ಸಣ್ಣ ಬಜೆಟ್ನಲ್ಲಿ ನಿರ್ಮಾಣವಾಗಿ ಭರ್ಜರಿ ಯಶಸ್ಸು ಕಂಡಿತು. ಏಕೆಂದರೆ ಆ ಚಿತ್ರದಲ್ಲಿ ಕಥೆಗೆ ಪ್ರಾಮುಖ್ಯತೆ ನೀಡಲಾಗಿತ್ತು. ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ರೂಪಾಯಿ ಸುರಿಯುವಷ್ಟು ರಾಮಾಯಣದ ಕಥೆಯೇನೂ ನೀರಸವಾಗಿಲ್ಲ. ಒಂದು ವೇಳೆ ನೀವು ಸುರಿದಿರುವ ಆ 4,000 ಕೋಟಿ ರೂಪಾಯಿಯ ಆಡಂಬರವು ಮೂಲ ಕಥೆಯ ಆತ್ಮವನ್ನೇ ಮರೆಮಾಚುವಂತಿದ್ದರೆ, ನಾನು ಅದನ್ನು ನಿರ್ಮಾಣ ಕಂಪನಿಯ ಹಣ ಪೋಲು ಎಂದೇ ಕರೆಯುತ್ತೇನೆ ಎಂದು ಕಿಡಿಕಾರಿದ್ದಾರೆ.
ಸೀತೆ ಯುದ್ಧ ಮಾಡುವ ದೃಶ್ಯಗಳಿಗೆ ಕಡಿವಾಣ ಹಾಕಲು ವಿದ್ವಾಂಸರ ಸಮಿತಿ ರಚನೆಗೆ ಆಗ್ರಹ
ಧಾರ್ಮಿಕ ಹಾಗೂ ಪೌರಾಣಿಕ ಸಿನಿಮಾಗಳನ್ನು ನಿರ್ಮಿಸುವ ಮುನ್ನ ಅವುಗಳ ಚಿತ್ರಕಥೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಧಾರ್ಮಿಕ ವಿದ್ವಾಂಸರನ್ನೊಳಗೊಂಡ ಪ್ರತ್ಯೇಕ ಸಮಿತಿಯೊಂದನ್ನು ರಚಿಸಬೇಕು ಎಂದು ಮುಖೇಶ್ ಖನ್ನಾ ಒತ್ತಾಯಿಸಿದ್ದಾರೆ. ಇಂತಹ ಮೂಲ ಕಥೆ ತಿರುಚುವ ಚಿತ್ರಗಳನ್ನು ತಡೆಯುವಲ್ಲಿ ಸೆನ್ಸಾರ್ ಮಂಡಳಿಯು ಜವಾಬ್ದಾರಿಯುತವಾಗಿ ವರ್ತಿಸದಿದ್ದರೆ, ಸರ್ಕಾರವು ವಿದ್ವಾಂಸರನ್ನೊಳಗೊಂಡ ವಿಶೇಷ ಆಯೋಗವನ್ನು ರಚಿಸಬೇಕು. ಆ ಸಮಿತಿಯು ಚಿತ್ರಕಥೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಧಿಕೃತ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡುವವರೆಗೂ ಸಿನಿಮಾ ನಿರ್ಮಾಣಕ್ಕೆ ಅನುಮತಿಯನ್ನೇ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಇಂತಹ ವಿದ್ವಾಂಸರ ಸಮಿತಿ ಅಸ್ತಿತ್ವಕ್ಕೆ ಬಂದರೆ, ಸಿನಿಮಾಗಳಲ್ಲಿ ಸೀತಾಮಾತೆ ಯುದ್ಧ ಮಾಡುವಂತಹ ಅನಗತ್ಯ ಹಾಗೂ ಅಸಂಬದ್ಧ ದೃಶ್ಯಗಳನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ಮೂಲ ರಾಮಾಯಣದಲ್ಲಿ ಸೀತೆ ಎಂದಿಗೂ ಯುದ್ಧ ಮಾಡುವುದಿಲ್ಲ, ಈ ದೃಶ್ಯವನ್ನು ನೀವು ಎಲ್ಲಿಂದ ತಂದಿರಿ ಎಂದು ಸಮಿತಿಯ ವಿದ್ವಾಂಸರು ನಿರ್ದೇಶಕರನ್ನು ನೇರವಾಗಿ ಪ್ರಶ್ನಿಸುತ್ತಾರೆ ಎಂದು ಮುಖೇಶ್ ಖನ್ನಾ ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.








