ಬೆಂಗಳೂರು: ಕೊರೊನಾ ಉಪಕರಣ ಖರೀದಿಯಲ್ಲಿ ಒಂದೇ ಒಂದು ರೂಪಾಯಿ ಅವ್ಯವಹಾರ ಆಗಿಲ್ಲ, ಒಂದು ವೇಳೆ ಆರೋಪ ಸಾಬೀತಾದ್ರೆ ಸಚಿವ ಸ್ಥಾನದಲ್ಲಿ ಒಂದು ನಿಮಿಷವೂ ಕೂರುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಕೋವಿಡ್ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರತಿಯೊಂದು ಪ್ರಶ್ನೆಗೂ ಶ್ರೀರಾಮುಲು ಲೆಕ್ಕ ನೀಡಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಈವರೆಗೆ 9 ಲಕ್ಚದ 65 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿ ಮಾಡಲಾಗಿದೆ. ಇದಕ್ಕೆ ಕೇವಲ 79.35 ಕೋಟಿ ರೂ.ಗಳನ್ನು ನೀಡಲಾಗಿದೆ. ಪಿಪಿಇ ಕಿಟ್ ಖರೀದಿಯಲ್ಲಿ 150 ಕೋಟಿ ಅವ್ಯವಹಾರ ಆಗಿದೆ ಎಂಬುದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೆಂಟಿಲೇಟರ್ ಖರೀದಿಯಲ್ಲೂ ಅಕ್ರಮ ನಡೆದಿಲ್ಲ. ಈವರೆಗೆ ರಾಜ್ಯಕ್ಕೆ 640 ವೆಂಟಿಲೇಟರ್‍ಗಳು ಬಂದಿವೆ. ಕೇಂದ್ರ ಸರ್ಕಾರವೇ ವೆಂಟಿಲೇಟರ್ ಖರೀದಿಸಿ ರಾಜ್ಯಕ್ಕೆ ಕೊಟ್ಟಿದೆ. ಇದಕ್ಕೆ ನಾವು ಹಣ ಕೊಟ್ಟಿಲ್ಲ. ವೆಂಟಿಲೇಟರ್‍ಗೆಂದೇ ಒಟ್ಟು 10.61 ಕೋಟಿ ಖರ್ಚು ಮಾಡಲಾಗಿದೆ. ಒಂದೊಂದು ವೆಂಟಿಲೇಟರ್‍ಗೆ ಒಂದು ಬೆಲೆ ಇದೆ. ಸಾಮಾನ್ಯ ವೆಂಟಿಲೇಟರ್‍ಗೆ ಒಂದು ಬೆಲೆ, ಐಸಿಯು ವೆಂಟಿಲೇಟರ್‍ಗೆ ಇನ್ನೊಂದು ಬೆಲೆ ಇದೆ. ಸುಮಾರು 4 ಲಕ್ಷದಿಂದ 60 ಲಕ್ಷದ ವರೆಗೆ ವೆಂಟಿಲೇಟರ್‍ಗಳ ಬೆಲೆ ಇದೆ. ಐಸಿಯುಗಳಲ್ಲಿ ಬಳಸುವ ವೆಂಟಿಲೇಟರ್‍ಗೆ 18 ಲಕ್ಷ ವೆಚ್ಚ ತಗುಲಿಗೆ ಎಂದು ಸಚಿವ ರಾಮುಲು ಮಾಹಿತಿ ನೀಡಿದರು.
ಎನ್-95 ಮಾಸ್ಕ್‍ಗಳನ್ನು 156 ರೂ.ಗೆ ಖರೀದಿ ಮಾಡಲಾಗಿದೆ. 30 ಸಾವಿರ ಸರ್ಜಿಕಲ್ ಗ್ಲೌಸ್ ಖರೀದಿ ಮಾಡಲಾಗಿದೆ. ಇದಕ್ಕೆ ನೀಡಿದ ಕೇವಲ 28.58 ಲಕ್ಷ ರೂ. ಸ್ಯಾನಿಟೈಸರ್‍ನ್ನು ಕೇಂದ್ರ ಸರ್ಕಾರದ ಆದೇಶದಂತೆ ಖರೀದಿಯಾಗಿದೆ. 500 ಎಂಎಲ್ ಬಾಟಲ್‍ನ 25 ಸಾವಿರ ಲೀಟರ್ ಸ್ಯಾನಿಟೈಸರ್‍ಗೆ ಆರ್ಡರ್ ಮಾಡಿದ್ದೇವೆ. ಸ್ಯಾನಿಟೈಸರ್‍ಗೆ 2.65 ಕೋಟಿ ಖರ್ಚು ಮಾಡಿದ್ದೇವೆ ಎಂದು ರಾಮುಲು ಲೆಕ್ಕ ನೀಡಿದ್ದಾರೆ.
ಮೆಡಿಕಲ್ ಸಾಮಗ್ರಿ ಖರೀದಿಯನ್ನು ಯಾವುದೇ ತನಿಖೆಗೆ ವಹಿಸುವುದಿಲ್ಲ. ಅಗತ್ಯವಿದ್ದರೆ ವಿಧಾನಸಭೆಯಲ್ಲೇ ದಾಖಲೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಶ್ರೀರಾಮುಲು ಕೊಟ್ಟ ಲೆಕ್ಕ ಹೀಗಿದೆ…
1. 9.65 ಲಕ್ಷ ಪಿಪಿಇ ಕಿಟ್ ಖರೀದಿ-ಬೆಲೆ 79.35 ಕೋಟಿ ರೂ.
ವೆಂಟಿಲೇಟರ್ -10.61 ಕೋಟಿ ರೂ.
ಐಸಿಯು ವೆಂಟಿಲೇಟರ್ ಬೆಲೆ-18 ಲಕ್ಷ
ಎನ್-95 ಮಾಸ್ಟ್-156 ರೂ.-11.51 ಕೋಟಿ ರೂ.
30 ಸಾವಿರ ಸರ್ಜಿಕಲ್ ಗ್ಲೌಸ್-28.58 ಲಕ್ಷ ರೂ.
ಸ್ಯಾನಿಟೈಸರ್-2.65 ಕೋಟಿ ರೂ.
ಗುರುವಾರ ಲೆಕ್ಕಕ್ಕೆ ಪ್ರತಿಕ್ರಿಯೆ
ಕೊರೊನಾ ಮೆಡಿಕಲ್ ಸಾಮಗ್ರಿಗಳ ಖರೀದಿ ಆರೋಪಕ್ಕೆ ಇಂದು ಆರೋಗ್ಯ ಸಚಿವ ಶ್ರೀರಾಮುಲು ಲೆಕ್ಕ ನೀಡುತ್ತಿದ್ದಂತೆ ಸರ್ಕಾರ ನೀಡಿದ ಲೆಕ್ಕದ ಬಗ್ಗೆ ಗುರುವಾರ ಉತ್ತರ ನೀಡುವುದಾಗಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಗುರುವಾರ ಪಕ್ಷದ ನಾಯಕರ ಜತೆ ಸೇರಿ ಸುದ್ದಿಗೋಷ್ಠಿಯಲ್ಲಿ ರಾಮುಲು ಲೆಕ್ಕಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಕಾಂಗ್ರೆಸ್ ತಿಳಿಸಿದೆ.








