ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ತಮ್ಮ ನಿವಾಸದಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರವಾಗಿ ರೈತ ಮುಖಂಡರ ಜೊತೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಆರ್.ಅಶೋಕ್ ರಾಜಕಾರಣಕ್ಕೆ ಬಂದಿದ್ದು ಯಾವಾಗ..? ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬಗ್ಗೆ ಅವರಿಗೆ ಏನು ಗೊತ್ತಿದೆ…? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅವರು ಹೊಲ ಉತ್ತಿದ್ದಾರಾ, ಇಲ್ವಾ ನಮಗೆ ಗೊತ್ತಿಲ್ಲ. ಮೇಟಿ ಹಾಲು ಕುಡಿಸ್ತೀವಿ ಅಂತಾ ನಮ್ಮ ಕಡೆ ಗಾದೆಯಿದೆ. ಹಾಗೆ ಮಾಡಿದ್ರೆ ಕೈಯಲ್ಲಿ ಬೊಬ್ಬೆ ಬರುತ್ತೆ. ಅದು ಅಶೋಕ್ ಅವರಿಗೆ ಗೊತ್ತಿದೆಯೇ ಎಂದು ಕಿಡಿಕಾರಿದರು.
ನನಗೆ ಇವತ್ತಿಗೂ ನೇಗಿಲು, ಕುಂಟೆ ಕಟ್ಟೋದು ಬರುತ್ತೆ. ಹಲುವೆ ಹೊಡೆಯೋದು ಗೊತ್ತಿದೆ, ಭೂಮಿ ಮಟ್ಟ ಮಾಡುವುದು ಬರುತ್ತೆ. ಅಶೋಕ್ ಗೆ ಇದರ ಬಗ್ಗೆ ಗೊತ್ತಿದೆಯೇ.. ಸುಮ್ಮನೆ ಕಂದಾಯ ಸಚಿವರಾದ್ರೆ ಎಲ್ಲವೂ ಗೊತ್ತಾಗಲ್ಲ. ಕಂದಾಯ ಸಚಿವರಾಗಿರೋದ್ರಿಂದ ಎಲ್ಲವನ್ನು ತಿಳಿಯಬೇಕು. ರೈತರ, ಹೊಸ ಜಮೀನಿನ ಬಗ್ಗೆ ತಿಳಿದುಕೊಳ್ಳಬೇಕು. ಅವರು ತಿಳಿದುಕೊಂಡಿದ್ದಾರೋ ಇಲ್ವೋ ಗೊತ್ತಿಲ್ಲ ಎಂದು ಕಂದಾಯ ಸಚಿವರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇದೇ ವೇಳೆ ಮೆಡಿಕಲ್ ಕಿಟ್ ಅವ್ಯವಹಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯನವರು, ಶ್ರೀರಾಮುಲು ಸುಳ್ಳು ಹೇಳಿದ್ದಾರೆ. ಇದನ್ನು ಮಾಧ್ಯಮಗಳು ಚರ್ಚೆ ಮಾಡಿ ಸುದ್ದಿ ಮಾಡಬೇಕು. ನಾಳೆ ಸುದ್ದಿಗೋಷ್ಠಿ ಮಾಡಿ ಈ ವಿಷಯವನ್ನು ಬಹಿರಂಗ ಮಾಡ್ತೇನೆ. ಸರ್ಕಾರಕ್ಕೆ ಮೂರು ಪತ್ರ ಬರೆದಿದ್ದೇನೆ. ನಿನ್ನೆ ಮುಖ್ಯ ಕಾರ್ಯದರ್ಶಿ ಜೊತೆನೂ ಮಾತನಾಡಿದ್ದೇನೆ. ಸಿಎಂ 24 ಗಂಟೆಯೊಳಗೆ ಮಾಹಿತಿ ಕೊಡ್ತೇನೆ ಅಂದಿದ್ರು. ಈವರೆಗೆ ಏನು ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.








