ಪೂರ್ವ ಅಸ್ಸಾಂ ಭಾಗದಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್‌ನ ನೈಸರ್ಗಿಕ ಅನಿಲ ಬಾವಿಯಲ್ಲಿ ಮತ್ತೆ ಸ್ಫೋಟವಾಗಿದ್ದು, ನಾಲ್ವರು ತಜ್ಞರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಬಾಗ್ಜನ್ ತೈಲ ವ್ಯಾಪ್ತಿಯ ಅನಿಲ ಬಾವಿಯಲ್ಲಿ ಜೂನ್ 9 ರಿಂದಲೂ ನಿರಂತರವಾಗಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಸೋರಿಕೆಯನ್ನು ನಿಯಂತ್ರಿಸಲು ಸಿಂಗಾಪುರದ ತಜ್ಞರ ತಂಡ ಹಲವು ದಿನಗಳಿಂದ ನಿರಂತರ ಪ್ರಯತ್ನದಲ್ಲಿ ತೊಡಗಿದೆ. ಇದರ ಬೆನ್ನಲ್ಲೇ ಇಂದು ಮತ್ತೆ ಬೆಂಕಿ ಅವಘಡ ಸಂಭವಿಸಿದೆ.
ಈ ಹಿಂದೆಯೇ ಅಂದ್ರೆ ಮೇ 27ರಿಂದಲೇ ಅನಿಲ ಸೋರಿಕೆಯಾಗಲು ಪ್ರಾರಂಭವಾಗಿತ್ತು. ಆದ್ರೆ ಜೂನ್ 9ರಂದು ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಇಬ್ಬರು ಸಾವನಪ್ಪಿದ್ದರು. ಘಟನಾ ಸ್ಥಳದ ಸುತ್ತಮುತ್ತಲಿನ ಗ್ರಾಮಸ್ಥರನ್ನು ವಾಸಿಸುತ್ತಿದ್ದ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲಾಗಿದ್ದು, ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ.








