ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಕ್ರಮ ವಲಸಿಗರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಘೋಷಿತ ತನಿಖೆ ನಡೆಸಿ ವೀಡಿಯೊ ಹಂಚಿಕೊಳ್ಳುವವರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂತಹ ವಿಜಿಲಾಂಟಿಸಂ ಅಥವಾ ಮಾರಲ್ ಪೋಲಿಸಿಂಗ್ ಪ್ರವೃತ್ತಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಅಂತರರಾಷ್ಟ್ರೀಯ ಅಪರಾಧ ಜಾಲಗಳು ಎಚ್ಚೆತ್ತುಕೊಳ್ಳುತ್ತವೆ. ಇದು ಸರ್ಕಾರದ ರಹಸ್ಯ ಕಾರ್ಯಾಚರಣೆಗಳಿಗೆ ಮತ್ತು ಭದ್ರತಾ ಸಂಸ್ಥೆಗಳ ತನಿಖೆಗೆ ದೊಡ್ಡ ಮಟ್ಟದ ಅಡ್ಡಿಯಾಗುತ್ತದೆ. ನಿಜವಾದ ದೇಶಭಕ್ತರು ಮತ್ತು ರಾಜ್ಯದ ಹಿತಾಸಕ್ತಿ ಬಯಸುವವರು ಮಾಹಿತಿ ಇದ್ದರೆ ಅದನ್ನು ನೇರವಾಗಿ ಪೊಲೀಸರಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು. ಅದನ್ನು ಬಿಟ್ಟು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದು ಸರಿಯಲ್ಲ ಎಂದು ಖರ್ಗೆ ತಿಳಿಸಿದರು.
ಅಕ್ರಮ ವಲಸಿಗರ ವಿರುದ್ಧ ಸರ್ಕಾರ ಈಗಾಗಲೇ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಕಳೆದ ಮೂರು ತಿಂಗಳಲ್ಲಿ ಬಾಂಗ್ಲಾದೇಶ ಮತ್ತು ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಿಂದ ಬಂದಿರುವ ಸುಮಾರು 1000 ವಲಸಿಗರನ್ನು ಪತ್ತೆ ಹಚ್ಚಲಾಗಿದೆ. ಇವರನ್ನು ವಿದೇಶಿಯರ ನೋಂದಣಿ ಕಚೇರಿಗೆ (FRO) ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ರಾಜ್ಯ ಸರ್ಕಾರವು ಗಡಿ ಭದ್ರತಾ ಪಡೆ (BSF) ಮತ್ತು ಎಫ್‌ಆರ್‌ಒ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ವಿಚಾರದಲ್ಲಿ ಶೇ.100ರಷ್ಟು ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಸಚಿವರು ವಿವರಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿ ಸರ್ಕಾರದ ವಿರುದ್ಧ ಟೀಕೆ ಮಾಡುವುದು ಅಥವಾ ಸ್ವಯಂ ತನಿಖೆ ಮಾಡುವುದು ಕೇವಲ ಪ್ರಚಾರದ ಕೃತ್ಯಗಳಾಗಿವೆ. ಇಂತಹ ಪ್ರವೃತ್ತಿಯಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟಾಗುತ್ತದೆ. ಇನ್ನು ಮುಂದೆ ಇಂತಹ ವಿಜಿಲಾಂಟಿಸಂ ಪ್ರದರ್ಶಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಾಧ್ಯತೆಯಿದೆ ಎಂದು ಸಚಿವರು ಎಚ್ಚರಿಸಿದ್ದಾರೆ. ಅಕ್ರಮ ವಲಸಿಗರ ಪತ್ತೆ ಹಚ್ಚಲು ವ್ಯವಸ್ಥಿತವಾದ ದಾರಿಗಳಿವೆ, ಸಾರ್ವಜನಿಕರು ಆ ದಾರಿಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.








