ನವದೆಹಲಿ: ದೆಹಲಿಯ ಐಐಟಿ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿಶಿಷ್ಟ ಶೈಲಿಯ ಭಾಷಣದ ಮೂಲಕ ಯುವ ಜನತೆಯ ಮನ ಗೆದ್ದಿದ್ದಾರೆ. ಸದಾ ಗಂಭೀರ ವಿಚಾರಗಳ ಬಗ್ಗೆ ಮಾತನಾಡುವ ಮೋದಿ, ಶನಿವಾರದ ಕಾರ್ಯಕ್ರಮದಲ್ಲಿ ಬಾಬಾ ಬಾಗೇಶ್ವರ್ ಅವರನ್ನು ಸ್ಮರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ನಗುವಿನ ಅಲೆ ಎಬ್ಬಿಸಿದರು.
ನಾನು ಬಾಬಾ ಬಾಗೇಶ್ವರ್ ಅಲ್ಲ ಆದರೆ ಏನೋ ನಡೆಯುತ್ತಿದೆ
ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಲು ಬಂದಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಿಮ್ಮೆಲ್ಲರ ಮನಸ್ಸಿನಲ್ಲಿ ಈಗ ಏನೋ ಓಡುತ್ತಿದೆ ಎಂಬುದು ನನಗೆ ತಿಳಿದಿದೆ. ನಾನು ಬಾಬಾ ಬಾಗೇಶ್ವರ್ ಅವರಂತೆ ಮನಸ್ಸಿನ ಮಾತು ಓದುವವನಲ್ಲ, ಆದರೂ ನಿಮ್ಮ ಭವಿಷ್ಯದ ಬಗ್ಗೆ ನೀವು ಯೋಚಿಸುತ್ತಿರುವುದು ನನಗೆ ಅರ್ಥವಾಗುತ್ತಿದೆ ಎಂದು ಹಾಸ್ಯ ಮಾಡಿದರು. ಮೋದಿಯವರ ಈ ಮಾತಿಗೆ ಐಐಟಿ ವಿದ್ಯಾರ್ಥಿಗಳು ಬಿದ್ದು ಬಿದ್ದು ನಕ್ಕರು.
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮಾತನಾಡಿದ ಪ್ರಧಾನಿ, ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ನಾಳೆಯ ಬಗ್ಗೆ ಒಂದು ಸ್ಪಷ್ಟ ಚಿತ್ರಣವಿರುತ್ತದೆ. ಕೆಲವರು ತಮ್ಮ ಮೊದಲ ಸಂಬಳದ ನಿರೀಕ್ಷೆಯಲ್ಲಿದ್ದರೆ, ಇನ್ನು ಕೆಲವರು ಹೊಸ ನಗರದಲ್ಲಿ ಜೀವನ ಆರಂಭಿಸುವ ಸಂಭ್ರಮದಲ್ಲಿದ್ದಾರೆ. ಅನೇಕರು ತಮ್ಮದೇ ಆದ ಸ್ಟಾರ್ಟ್ ಅಪ್ ಆರಂಭಿಸುವ ಕನಸು ಕಾಣುತ್ತಿದ್ದಾರೆ. ನಿಮ್ಮ ಹಾದಿಗಳು ಬೇರೆ ಇರಬಹುದು, ಆದರೆ ನಿಮ್ಮೆಲ್ಲರ ಗುರಿ ಒಂದೇ ಆಗಿರಲಿ ಎಂದು ಅವರು ಹಾರೈಸಿದರು.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಿಜೆಪಿ ಅಂದರೆ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯ ನಂತರ ಪ್ರಧಾನಿ ಮೋದಿ ಭಾಗವಹಿಸಿದ ಮೊದಲ ಸಾರ್ವಜನಿಕ ಕಾರ್ಯಕ್ರಮ ಇದಾಗಿತ್ತು. ಪ್ರತಿಭಟನೆಗಳ ನಡುವೆಯೂ ಯುವ ಪೀಳಿಗೆಯ ಮೇಲೆ ತಮಗಿರುವ ಅಚಲ ವಿಶ್ವಾಸವನ್ನು ಅವರು ಪುನರುಚ್ಚರಿಸಿದರು. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತ್ಯಂತ ದೊಡ್ಡದಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ನಾವು ನಿಮ್ಮನ್ನು ನಂಬುತ್ತೇವೆ, ದೇಶಕ್ಕೆ ನಿಮ್ಮ ಅಗತ್ಯವಿದೆ ಎಂದು ಹೇಳಿದ ಮೋದಿ, ಮುಂದಿನ 30 ರಿಂದ 35 ವರ್ಷಗಳು ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಕಾಲಘಟ್ಟವಾಗಿದೆ. ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಪೂರಕವಾಗಿರಬೇಕು. ಪ್ರತಿಯೊಂದು ಪೀಳಿಗೆಗೂ ದೇಶದ ಬಗ್ಗೆ ಒಂದು ಜವಾಬ್ದಾರಿ ಇರುತ್ತದೆ. ಆ ಜವಾಬ್ದಾರಿಯನ್ನು ಈ ಯುವ ಪೀಳಿಗೆ ಸಮರ್ಥವಾಗಿ ನಿಭಾಯಿಸುತ್ತದೆ ಎಂಬ ನಂಬಿಕೆ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.








