ಬೆಂಗಳೂರು: ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ತರಬೇಕು ಎಂದು ಇಂದು ನಡೆದ ಕರ್ನಾಟಕ ಅನುದಾನರಹಿತ ಉಪನ್ಯಾಸಕರ ಸಂಘ (KULA – Karnataka Unaided Lecturer Association) ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೊರೊನಾ ಆರಂಭವಾದ ನಂತರದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನುದಾನರಹಿತ ಪ್ರಾಧ್ಯಾಪಕರ ಸಮಸ್ಯೆಗಳನ್ನು ಸರ್ಕಾರ, ಜನಪ್ರತಿನಿಧಿಗಳು ಮತ್ತು ಆಡಳಿತ ಮಂಡಳಿಗಳೂ ಕಡೆಗಣಿಸಿವೆ. ಈ ಹಿನ್ನೆಲೆಯಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳನ್ನು ಪ್ರತಿನಿಧಿಸುವವ ಜನಪ್ರತಿನಿಧಿಗಳ ಮೇಲೆ ಒತ್ತಡ ತರಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಅನುದಾನರಹಿತ ಪ್ರಾಧ್ಯಾಪಕರ ಸಮಸ್ಯೆಗಳ ಪರಿಹಾರಕ್ಕಾಗಿ ವಿಚಾರ ಸಂಕಿರಣಗಳನ್ನು ಆಯೋಜಿಸಲು ನಿರ್ಣಯಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ಸಾಹಿತಿಗಳು, ನಿವೃತ್ತ ಅಧ್ಯಾಪಕರು, ಶಿಕ್ಷಕರ ಸಂಘಟನೆಯಲ್ಲಿ ಭಾಗಿಯಾಗಿರುವವರ ಸಲಹೆ ಸೂಚನೆಗಳನ್ನು ಕೈಗೊಂಡು ಮುಂದುವರೆಯಲು ತೀರ್ಮಾನಿಸಲಾಗಿದೆ. ಅಲ್ಲದೇ, ಕರ್ನಾಟಕ ಅನುದಾನರಹಿತ ಉಪನ್ಯಾಸಕರ ಸಂಘ (KULA) ತಿಂಗಳಿಗೆ ಒಮ್ಮೆ ಸಭೆ ಸೇರಿ ಮುಂದಿನ ನಡೆಯ ಕುರಿತು ಚರ್ಚಿಸಲು ಚಿಂತನೆ ನಡೆಸಲಾಗಿದೆ.
ಇಂದಿನ ಸಭೆಯಲ್ಲಿ ಗಂಗಾಧರ್, ಲಕ್ಷ್ಮೀನಾರಾಯಣ್ ಕೆ., ರಮೇಶ್, ನಾಗೇಶ್, ಭಾಸ್ಕರ್, ವಾಸುಮೂರ್ತಿ, ಅಡಿವೆಪ್ಪ, ಡಾ. ಪ್ರದೀಪ್ ಎಲ್.ಎಂ., ಡಾ. ವಿಠ್ಠಲ್ ತಳವಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದ್ದು, ಮುಂದಿನ ನಡೆಗಳ ಕುರಿತು ಚರ್ಚಿಸಿದ್ದಾರೆ.








