ಮೈಸೂರು : ವಿಧಾನ ಪರಿಷತ್ ಗೆ ನಾಮನಿರ್ದೇಶನಗೊಂಡಿರುವ ಹೆಚ್.ವಿಶ್ವನಾಥ್ ಅವರು ಇಂದು ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದರು. ಈ ವೇಳೆ ವಿಶ್ವನಾಥ್ ಬಗ್ಗೆ ಮಾತನಾಡಿದ ಪ್ರಸಾದ್, ಹೆಚ್.ವಿಶ್ವನಾಥ್ ಛಲ ಬಿಡದ ತ್ರಿವಿಕ್ರಮನ ರೀತಿಯಲ್ಲಿ ಎಂಎಲ್ ಸಿ ಆಗಿದ್ದಾರೆ. ಈಗ ಅಟ್ಟಕ್ಕೆ ಏರಿದ್ದಾರೆ. ಸ್ವರ್ಗಕ್ಕೆ ಏರುವುದರ ಜೊತೆಗೆ ವಿಶ್ವನಾಥ್ ಬಹಳ ಯೋಚನೆ ಮಾಡಬೇಕಾಗಿದೆ ಎಂದರು.
ವಿಶ್ವನಾಥ್ ಗೆ ಮಂತ್ರಿ ಸ್ಥಾನ ಕಷ್ಟ
ಇದೇ ವೇಳೆ ವಿಶ್ವನಾಥ್ ಅವರಿಗೆ ಮಂತ್ರಿಸ್ಥಾನ ಬಗ್ಗೆ ಮಾತನಾಡಿದ ಸಂಸದರು, ಸರ್ಕಾರದಲ್ಲಿ ಉಳಿದಿರುವುದು ಕೆಲವೇ ಕೆಲವು ಮಂತ್ರಿ ಸ್ಥಾನಗಳು. ಅವರಿಗೆ ಎಚ್ಚರಿಕೆಯಿಂದ ಅವಕಾಶ ಮಾಡಿಕೊಡಬೇಕಾಗಿದೆ. ಈಗಾಗಲೇ ಸಾಮಾಜಿಕ ನ್ಯಾಯದ ಅನುಸಾರ ಕೆ.ಎಸ್.ಈಶ್ವರಪ್ಪ, ಭೈರತಿ ಬಸವರಾಜ್ ಮಂತ್ರಿಗಳಾಗಿದ್ದಾರೆ. ಮುಂದಿನ ಬಾರಿ ಎಂಟಿಬಿ ನಾಗರಾಜ್, ಆರ್.ಶಂಕರ್ ಸಚಿವರಾಗಬಹುದು. ಈ ಸಂದರ್ಭದಲ್ಲಿ ವಿಶ್ವನಾಥ್ ಗೆ ಮಂತ್ರಿ ಸ್ಥಾನ ಕಷ್ಟವಾಗಬಹುದು ಎಂದರು.
ನಾನು ವಿಶ್ವನಾಥ್ ಗೆ ಚುನಾವಣೆಯಲ್ಲಿ ಸ್ಪರ್ಧೆ ಬೇಡ. ನೇರವಾಗಿ ಎಂಎಲ್ ಸಿ ಸ್ಥಾನ ಪಡೆದು ಮಂತ್ರಿಯಾಗಿ ಎಂದು ಹೇಳಿದ್ದೆ. ಆದರೆ ನನ್ನ ಮಾತನ್ನು ಕೇಳಲಿಲ್ಲ.. ನನ್ನ ಮಾತು ಕೇಳಿದ್ದರೆ ಈಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುತ್ತಿದ್ದರು. ಆದರೆ ಈ ನಡುವೆ ಕಷ್ಟಪಟ್ಟು ಎಂಎಲ್ ಸಿ ಆಗಿ ನಾಮನಿರ್ದೇಶನಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಂತ್ರಿಯಾಗುವುದು ಸ್ವಲ್ಪ ಕಷ್ಟ ಎಂದು ಹೇಳಿದ್ದಾರೆ.








