ಕೃಷಿ ಭೂಮಿಯಿಂದ ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಎಂ.ಎಸ್. ಧೋನಿ…!
ಟೀಮ್ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟಂಬರ್ 19ರಿಂದ ನವೆಂರ್ 8ರವರೆಗೆ ಯುಎಇನಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಯಾಗಲಿದೆ. 2020ರ ಐಪಿಎಲ್ ಟೂರ್ನಿಗೆ ಈಗಾಗಲೇ ಪೂರ್ವ ತಯಾರಿಗಳು ನಡೆಯುತ್ತಿವೆ.
ಹೀಗಾಗಿ ಧೋನಿ ಅಭಿಮಾನಿಗಳ ಸಂತಸ ಹೆಚ್ಚಿದೆ. 2019ರ ಬಳಿಕ ಧೋನಿಯ ಆಟವನ್ನು ಯಾರು ನೋಡಿಲ್ಲ. ಕ್ರಿಕೆಟ್ ಅಭಿಮಾನಿಗಳು ಧೋನಿಯ ಆಟವನ್ನು ಮಿಸ್ ಮಾಡಿಕೊಂಡಿದ್ದಾರೆ. ಮಾರ್ಚ್‍ನಲ್ಲಿ ನಡೆಯಬೇಕಿದ್ದ ಐಪಿಎಲ್ ಮತ್ತು 2020ರ ವಿಶ್ವಕಪ್‍ನಲ್ಲಿ ಧೋನಿ ಆಡಬಹುದು ಎಂಬ ನಿರೀಕ್ಷೆ ಇತ್ತು. ಅಲ್ಲದೆ ಐಪಿಎಲ್ ಟೂರ್ನಿಗೆ ಧೋನಿ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದ್ರೆ ಕೋವಿಡ್ ನಿಂದಾಗಿ ಟಿ-ಟ್ವೆಂಟಿ ವಿಶ್ವಕಪ್ ಮುಂದೂಡಿದೆ. ಹಾಗಾಗಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಸೆಪ್ಟಂಬರ್ -ನವೆಂಬರ್ ನಲ್ಲಿ ನಡೆಯಲಿರುವ ಐಪಿಎಲ್ ನಲ್ಲಿ ಆಡೋದು ಪಕ್ಕಾ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಧೋನಿಯ ಆಟವನ್ನು ಅವರ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ.
ಆದ್ರೆ ಧೋನಿ ಕಳೆದ ಒಂದು ವರ್ಷದಿಂದ ಏನು ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಧೋನಿ ಈಗಾಗಲೇ ಉತ್ತರ ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಹೊರ ಬಂದ ನಂತರ ಧೋನಿ ಯಾವುದೇ ದೇಶಿ ಟೂರ್ನಿಗಳನ್ನು ಆಡಿಲ್ಲ. ಸೈನಿಕರ ಜೊತೆ ಒಂದು ತಿಂಗಳು ಕಾಲ ಕಳೆದಿದ್ದರು. ಆ ನಂತರ ಕೆಲವೊಂದು
ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇನ್ನುಳಿದಂತೆ ಅವರು ದಿನ ಕಳೆದದ್ದು ತನ್ನ ತವರಿ ರಾಂಚಿಯ ಫಾರ್ಮ್ ಹೌಸ್‍ನಲ್ಲಿ.
ಹೌದು, ರಾಂಚಿಯ ಫಾರ್ಮ್ ಹೌಸ್ ನಲ್ಲಿ ತನ್ನ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದರು. ಕಳೆದ ನಾಲ್ಕೈದು ತಿಂಗಳಿನಿಂದ ಮನೆಯಲ್ಲೇ ಇರುವ ಧೋನಿ ಪಕ್ಕಾ ರೈತನಾಗಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಎಲ್ಲಿಯೂ ಹೊರಗಡೆ ಹೋಗುವ ಹಾಗಿಲ್ಲ. ಹಾಗಾಗಿ ಧೋನಿ ತನ್ನ 40-50 ಎಕರೆ ಜಮೀನಿನಲ್ಲಿ ಆರ್ಗನಿಕ್ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಬಾಳೆ, ಪಪ್ಪಾಯ್ ಸೇರಿದಂತೆ ಅನೇಕ ಆರ್ಗನಿಕ್ ಕೃಷಿ ಉತ್ಪನ್ನಗಳನ್ನು ತನ್ನ ಫಾರ್ಮ್ ಹೌಸ್ ನಲ್ಲಿ ಬೆಳೆಸಿದ್ದಾರೆ.
ಕೃಷಿಗಾಗಿ ಟ್ರ್ಯಾಕ್ಟರ್ ಕೂಡ ಖರೀದಿ ಮಾಡಿ ತಾನೇ ಉಳುಮೆ ಮಾಡುವ ವಿಡಿಯೋ ಒಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಅವರ ಪತ್ನಿ ಸಾಕ್ಷಿ ಸಿಂಗ್ ಹಾಕಿಕೊಂಡಿದ್ದರು. ಇನ್ನೊಂದೆಡೆ ಧೋನಿ ರೈತರಿಗಾಗಿ ತನ್ನ ಫಾರ್ಮ್ ಹೌಸ್ ನಲ್ಲಿ ಸಾವಯವ ರಸಗೊಬ್ಬರವನ್ನು ತಯಾರು ಮಾಡುತ್ತಿದ್ದಾರೆ. ಇದಕ್ಕಾಗಿ ಅನೇಕ ಮಂದಿ ಕೆಲಸ ಕೂಡ ಮಾಡುತ್ತಿದ್ದಾರೆ.
ಹೀಗೆ ಲಾಕ್ ಡೌನ್ ಟೈಮ್ ನಲ್ಲಿ ಪಕ್ಕಾ ಕೃಷಿಕನಂತೆ ತನ್ನ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಧೋನಿ ಈಗ ಮತ್ತೆ ಕ್ರಿಕೆಟ್ ಕಿಟ್‍ನೊಂದಿಗೆ ಮೈದಾನಕ್ಕೆ ಇಳಿಯಬೇಕಾಗಿದೆ. ಐಪಿಎಲ್ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಬಹುಶಃ ಆಗಸ್ಟ್ 20ರಂದು ಐಪಿಎಲ್ ಫ್ರಾಂಚೈಸಿಗಳ ಜೊತೆ ಧೋನಿ ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಧೋನಿ ಆಟವನ್ನು ಸವಿಯಬಹುದು. ಹಾಗೇ ಈ ಐಪಿಎಲ್ ಧೋನಿಯ ಭವಿಷ್ಯವನ್ನು ಸಹ ನಿರ್ಧಾರ ಮಾಡಲಿದೆ.








