ಬಿಸಿಸಿಐ ಬೊಕ್ಕಸ ತುಂಬುತ್ತಿರುವ ಐಪಿಎಲ್ ಟೂರ್ನಿಯ ದುಡ್ಡಿನ ಮೂಲ ಯಾವುದು ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಐಪಿಎಲ್ ಟೂರ್ನಿ ಬಹು ದೊಡ್ಡ ಆಸ್ತಿ. ಬಿಸಿಸಿಐನ ಬೊಕ್ಕಸವನ್ನು ತುಂಬಿ ತುಳುಕುವಂತೆ ಮಾಡುವ ಐಪಿಎಲ್ ಟೂರ್ನಿ ಚಿನ್ನದ ಮೊಟ್ಟೆ ಇಡುವ ಕೋಳಿ. ಹೀಗಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ರದ್ದುಗೊಳಿಸುವ ಅವಕಾಶಗಳೇ ಇರಲಿಲ್ಲ. ಹೇಗಾದ್ರೂ ಮಾಡಿ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲೇಬೇಕು ಎಂಬ ಹಠ ಬಿಸಿಸಿಐಗಿತ್ತು. ಇದಕ್ಕಾಗಿಯೇ ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಕೂಡ ರದ್ದು ಮಾಡುವಂತೆ ಐಸಿಸಿ ಮೇಲೆ ಒತ್ತಡ ಹೇರುವುದಕ್ಕೂ ಹಿಂದೆ ಮುಂದೆ ನೋಡಲ್ಲ. ಒಂದು ಮೂಲದ ಪ್ರಕಾರ ಬಿಸಿಸಿಐನ ಒತ್ತಡಕ್ಕೆ ಮಣಿದು ಐಸಿಸಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಿರುವುದು ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಈ ಮಾತು ನಿಜವಾಗಿದ್ರೂ ಅಚ್ಚರಿ ಏನಿಲ್ಲ. ಯಾಕಂದ್ರೆ ಐಸಿಸಿಗೂ ಬಿಸಿಸಿಐ ಬೇಕೇ ಬೇಕು.
ಅದೇನೇ ಇರಲಿ, ಐಪಿಎಲ್ ಟೂರ್ನಿಯಲ್ಲಿ ಹಣ ನೀರಿನಂತೆ ಹರಿದು ಬರುತ್ತಿದೆ. ಫ್ರಾಂಚೈಸಿಗಳ ದುಡ್ಡು, ಜಾಹಿರಾತು, ನೇರ ಪ್ರಸಾರದ ಹಕ್ಕು, ಕಾರ್ಪರೇಟ್ ಕಂಪೆನಿಗಳು ಹೀಗೆ ಐಪಿಎಲ್ಗೆ ಎಲ್ಲಾ
ಮೂಲಗಳಿಂದಲೂ ದುಡ್ಡು ಬರುತ್ತದೆ. ಹಾಗಿದ್ರೆ ಬಿಸಿಸಿಐ ಈ ದುಡ್ಡು ಅನ್ನು ಏನು ಮಾಡುತ್ತೆ ಅನ್ನೋದಕ್ಕೂ ಉತ್ತರ ಇಲ್ಲಿದೆ. ಬಿಸಿಸಿಐ ಮಾಜಿ ಕಾರ್ಯದರ್ಶಿ, ಅಧ್ಯಕ್ಷ ದಿ. ಜಗ್ಮೋಹನ್ ದಾಲ್ಮಿಯ ಅವರ ದೂರದೃಷ್ಟಿ, ವಂಚಕನಾಗಿದ್ರೂ ಚಾಣಕ್ಯ ಲಲಿತ್ ಮೋದಿಯ ತಂತ್ರಗಾರಿಕೆಯಿಂದ ಇವತ್ತು ಬಿಸಿಸಿಐ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದ್ದು. ಹಾಗೇ ಐಪಿಎಲ್ ಈ ಮಟ್ಟದಲ್ಲಿ ಖ್ಯಾತಿ ಗಳಿಸಲು ಸಾಧ್ಯವಾಗಿದ್ದು ಎಂಬುದನ್ನು ಮರೆಯುವ ಹಾಗಿಲ್ಲ.
ವಿಶ್ವ ಕ್ರಿಕೆಟ್ ನಲ್ಲಿ ಬಿಸಿಸಿಐಗೆ ತನ್ನದೇ ಆದ ಸ್ಥಾನ ಮಾನವಿದೆ. ಎಲ್ಲವನ್ನೂ ದುಡ್ಡಿನಿಂದಲೇ ಲೆಕ್ಕಚಾರ ಮಾಡುವ ಬಿಸಿಸಿಐ ಹೇಳಿದ ಹಾಗೇ ಇನ್ನುಳಿದ ಕ್ರಿಕೆಟ್ ಸಂಸ್ಥೆಗಳು ಕುಣಿಯುತ್ತವೆ. ಯಾಕಂದ್ರೆ ಬಿಸಿಸಿಐ ಅನ್ನು ಎದುರು ಹಾಕಿಕೊಂಡ್ರೆ ಹಣ ಬರುವುದಿಲ್ಲ ಎಂಬ ಲೆಕ್ಕಚಾರವೂ ಬೇರೆ ಬೇರೆ ಕ್ರಿಕೆಟ್ ಸಂಸ್ಥೆಗಳದ್ದು. ಅಷ್ಟೇ ಅಲ್ಲ, ಟೀಮ್ ಇಂಡಿಯಾ ವಿರುದ್ಧದ ಸರಣಿಯನ್ನು ಕೂಡ ಬೇರೆ ಕ್ರಿಕೆಟ್ ತಂಡಗಳ ಮಂಡಳಿಗಳು ಕಾತರದಿಂದ ಕಾಯುತ್ತಿರುತ್ತವೆ. ಇನ್ನು ಐಪಿಎಲ್ ಅಷ್ಟೇ. ವಿದೇಶಿ ಆಟಗಾರರು ಕೋಟಿ ಕೋಟಿ ಲೆಕ್ಕದಲ್ಲಿ ಹಣ ಪಡೆಯುತ್ತಿದ್ದಾರೆ. ಇದು ಅಲ್ಲಿನ ಕ್ರಿಕೆಟ್ ಮಂಡಳಿಗೂ ಸಹಾಯವಾಗುತ್ತದೆ.
ಈ ವರ್ಷ ಅಂದ್ರೆ 2020ರ ಐಪಿಎಲ್ ಭವಿಷ್ಯ ಬಹುತೇಕ ಮುಗಿದೇ ಹೋಯ್ತು ಅಂತ ಎಲ್ಲರೂ ಭಾವಿಸಿದ್ದರು. ಆದ್ರೆ ಬಿಸಿಸಿಐ ಸಮಯಕ್ಕಾಗಿ ಕಾಯುತ್ತಿತ್ತು. ಈ ನಡುವೆ, ಶ್ರೀಲಂಕಾ, ಯುಎಇ ಕ್ರಿಕೆಟ್ ಮಂಡಳಿಗಳು ಕೂಡ ಐಪಿಎಲ್ ಆತಿಥ್ಯಕ್ಕೆ ಮುಂದೆ ಬಂದಿದ್ದವು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈಗ ಯುಎಇನಲ್ಲಿ ಸೆಪ್ಟಂಬರ್ 19ರಿಂದ ನವೆಂಬರ್ 8ರವರೆಗೆ ಆಯೋಜನೆ ಮಾಡಲಿದೆ. ಇದಕ್ಕೆ ಈಗ ಭಾರತ ಸರ್ಕಾರದ ಅನುಮತಿಯೊಂದು ಬೇಕಿದೆ ಅಷ್ಟೇ.
ಬಿಸಿಸಿಐ ಬೊಕ್ಕಸ ತುಂಬತ್ತಿರುವ ಐಪಿಎಲ್ನ ಹಣದ ಮೂಲ ಏನು ?
ಹೌದು, ಬಿಸಿಸಿಐ ಬೊಕ್ಕಸ ತುಂಬುತ್ತಿರುವ ಐಪಿಎಲ್ ಹಣದ ಮೂಲವನ್ನು ಹುಡಕಿದಾಗ ಅದೊಂದು ನಿಧಿ ಎಂದು ಹೇಳಬಹುದು. ಇಲ್ಲಿ ಬಗೆದಷ್ಟು ಸಂಪತ್ತು ಸಿಗುತ್ತದೆ.
ಪಂದ್ಯಗಳ ನೇರ ಪ್ರಸಾರದಿಂದ 3300 ಕೋಟಿ ರೂಪಾಯಿ.
ಬಿಸಿಸಿಐಗೆ ಐಪಿಎಲ್ ಪಂದ್ಯಗಳ ನೇರ ಪ್ರಸಾರದಿಂದಲೇ 3300 ಕೋಟಿ ರೂಪಾಯಿ ಸಿಗುತ್ತದೆ. ಸ್ಟಾರ್ ಟಿವಿ ಗ್ರೂಪ್ ಈಗಾಗಲೇ 2000 ಕೋಟಿ ರೂಪಾಯಿಯನ್ನು ಮುಂಗಡವಾಗಿ ಪಾವತಿಸಿದೆ.
ಟೈಟಲ್ ಪ್ರಾಯೋಜಕತ್ವದಿಂದ 440 ಕೋಟಿ ರೂ.
ಇನ್ನು ಐಪಿಎಲ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವದಿಂದ ಬಿಸಿಸಿಐ ಬೊಕ್ಕಸಕ್ಕೆ 440 ಕೋಟಿ ರೂಪಾಯಿ ಸಿಗುತ್ತದೆ. ಚೈನಾ ಮೂಲದ ಮೊಬೈಲ್ ಕಂಪೆನಿಯಾಗಿರುವ ವಿವೋ ಬಿಸಿಸಿಐ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ನಡುವೆ ಇಂಡೋ -ಚೀನಾ ಬಾರ್ಡರ್ ನಲ್ಲಿ ಆಗಿರುವ ಸಮಸ್ಯೆ ಚೀನಾ ಮೂಲದ ವಿವೋ ಕಂಪೆನಿಗೆ ತೊಂದರೆಯನ್ನುಂಟು ಮಾಡಬಹುದು. ಆದ್ರೆ ಬಿಸಿಸಿಐ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಇನ್ನಿತರ ಪ್ರಾಯೋಜಕತ್ವದಿಂದ 170 ಕೋಟಿ ರೂ.
ಇನ್ನು ಐಪಿಎಲ್ ಟೂರ್ನಿಯ ವೇಳೆ ಅನೇಕ ಕಂಪೆನಿಗಳು ಪ್ರಾಯೋಜಕತ್ವವನ್ನು ನೀಡುತ್ತಿವೆ. ಇದರಿಂದ ಬಿಸಿಸಿಐಗೆ ಸುಮಾರು 170 ಕೋಟಿ ರೂಪಾಯಿ ಸಿಗುತ್ತದೆ. ಡ್ರೀಮ್ 11, ಪೇಟಿಎಂ, ಸಿಇಎಟಿ, ಸೇರಿದಂತೆ ಅನೇಕ ಕಂಪೆನಿಗಳು ಪ್ರಾಯೋಜಕತ್ವ ನೀಡುತ್ತಿವೆ.
ಇನ್ನು ಐಪಿಎಲ್ ಫ್ರಾಂಚೈಸಿಗಳು ಕೂಡ ಐಪಿಎಲ್ ಪಂದ್ಯದಲ್ಲಿ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ. ಆಟಗಾರರ ಕಿಟ್, ಬ್ರ್ಯಾಂಡ್ ಸೇರಿದಂತೆ ಅನೇಕ ಮೂಲಗಳಿಂದ ಹಣದ ಹೊಳೆಯೇ ಹರಿದು ಬರುತ್ತದೆ. ಹೀಗಾಗಿ ಐಪಿಎಲ್ ಬಿಸಿಸಿಐ, ಫ್ರಾಂಚೈಸಿಗಳು ಸೇರಿದಂತೆ ಎಲ್ಲರಿಗೂ ನಿಧಿ ಎಂದರೇ ತಪ್ಪಾಗಲಾರದು.
ಬಿಸಿಸಿಐ ಈ ಹಣವನ್ನು ಏನು ಮಾಡುತ್ತದೆ.. ?
ಕೋಟಿ ಕೋಟಿ ದುಡ್ಡು ಹರಿದು ಬಂದ್ರೂ ಬಿಸಿಸಿಐಗೆ ಖರ್ಚು ಕೂಡ ಇದೆ. ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಿ ಉಳಿದಂತಹ ಹಣವನ್ನು ಬಿಸಿಸಿಐ ಆಟಗಾರರ ವೇತನ ಸೇರಿದಂತೆ ದೇಸಿ ಕ್ರಿಕೆಟ್ಗೆ ಭರಿಸುತ್ತದೆ. ಪ್ರತಿ ವರ್ಷ ಬಿಸಿಸಿಐ ಸುಮಾರು 20000 ದೇಸಿ ಪಂದ್ಯಗಳನ್ನು ಆಡಿಸುತ್ತದೆ. ಇದಕ್ಕೆಲ್ಲಾ ಈ ಹಣವನ್ನು ವಿನಿಯೋಗ ಮಾಡಲಾಗುತ್ತದೆ.
ಈ ಬಾರಿ ಜಾಸ್ತಿ ಹಣ ಉಳಿಯಲ್ಲ… ?
ಕೋವಿಡ್ -19ನಿಂದಾಗಿ ಈ ಬಾರಿಯ ಐಪಿಎಲ್ ನಲ್ಲಿ ಬಿಸಿಸಿಐಗೆ ಸಾಕಷ್ಟು ಖರ್ಚು ಇದೆ. ಯುಎಇ ಕ್ರಿಕೆಟ್ ಸಂಸ್ಥೆಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಹಾಗೇ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಿಸಿಸಿಐಗೆ ಈ ಬಾರಿಯ ಐಪಿಎಲ್ ನಲ್ಲಿ ಲಾಭಂಶ ಕಡಿಮೆಯಾಗಬಹುದು. ಅದೂ ಅಲ್ಲದೇ ಈ ಬಾರಿಯ ಐಪಿಎಲ್ ಪ್ರೇಕ್ಷಕರಿಲ್ಲದೇ ಆಡಬೇಕಾಗುತ್ತದೆ. ಇಲ್ಲೂ ಕೂಡ ಬಿಸಿಸಿಐಗೆ ನಷ್ಟವಾಗುತ್ತದೆ. ಒಟ್ಟಿನಲ್ಲಿ ಬಿಸಿಸಿಐ ಹೆಚ್ಚಿನ ಲಾಭವಿಲ್ಲದಿದ್ರೂ ತನ್ನ ಪ್ರತಿಷ್ಠೆ ಹಾಗೂ ಮುಂಗಡವಾಗಿ ಪಾವತಿಸಿರುವ ಹಣವನ್ನು ಹಿಂತಿರುಗಿಸಬಾರದು ಎಂಬ ಲೆಕ್ಕಾಚಾರವಿಟ್ಟುಕೊಂಡೇ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲಾಗುತ್ತಿದೆ.








