ಯುಎಇ ಐಪಿಎಲ್‍ನಲ್ಲಿ ಸ್ಪಿನ್ನರ್ ಗಳು ಕಾರುಬಾರು ನಡೆಸ್ತಾರಾ ?
ಯುಎಇನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್ ನಲ್ಲಿ ಸ್ಪಿನ್ನರ್ ಗಳು ಈ ಬಾರಿ ಕಾರುಬಾರು ನಡೆಸುವ ಸಾಧ್ಯತೆ ಇದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಯುಎಇನಲ್ಲಿರುವ ಮೈದಾನ ದೊಡ್ಡದಾಗಿದೆ. ಹೀಗಾಗಿ ಸ್ಪಿನ್ನರ್‍ಗಳಿಗೆ ಹೆಚ್ಚಿನ ಅನುಕೂಲವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಈ ಬಾರಿಯ ಐಪಿಎಲ್ ನಲ್ಲಿ ತವರು ನೆಲದ ಲಾಭ ಪಡೆಯಲು ಯಾವುದೇ ತಂಡಗಳಿಗೂ ಅವಕಾಶವಿಲ್ಲ. ಎಲ್ಲಾ ತಂಡಗಳಿಗೂ ಸಮಾನ ಅವಕಾಶ ಸಿಗಲಿದೆ. ಯುಎಇನಲ್ಲಿ ಅನೇಕ ಆಟಗಾರರಿಗೆ ಹೊಸ ಅನುಭವಾಗಲಿದೆ. 2014ರಲ್ಲಿ ಇಲ್ಲಿ ಐಪಿಎಲ್ ನಡೆದಿತ್ತು. ಆದ್ರೆ ಈ ಬಾರಿ ಪ್ರೇಕ್ಷಕರ ಬೆಂಬಲ ಇಲ್ಲ. ಪ್ರೇಕ್ಷಕರಿಲ್ಲದೇ ಆಡಬೇಕಾಗುತ್ತದೆ. ಹೀಗಾಗಿ ಆಟಗಾರರು ತಮ್ಮ ಆಟದ ಖದರನ್ನು ಪ್ರದರ್ಶಿಸಲು ಶಕ್ತಿ ಮೀರಿ ಪ್ರಯತ್ನ ನಡೆಸಬೇಕು ಎಂದು ಚೋಪ್ರಾ ಹೇಳಿದ್ದಾರೆ.
ಇನ್ನು ಈ ಬಾರಿಯ ಟೂರ್ನಿಯಲ್ಲಿ ಆರ್‍ಸಿಬಿಗೆ ಗೆಲ್ಲುವ ಅವಕಾಶವಿದೆ. ಕಳೆದ 12 ವರ್ಷಗಳಲ್ಲಿ ಆರ್‍ಸಿಬಿ ಪ್ರಶಸ್ತಿ ಗೆದ್ದಿಲ್ಲ. ತಂಡದಲ್ಲಿ ಅಪ್ರತಿಮ ಆಟಗಾರರು ಇದ್ರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದು ಹೋದ ಟೂರ್ನಿಗಳ ಬಗ್ಗೆ ಯೋಚಿಸಬೇಡಿ. ಈ ಬಾರಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ನಂತಹ ಬೌಲರ್‍ಗಳು
ಇರುವುದರಿಂದ ಇಲ್ಲಿನ ಪಿಚ್‍ನ ಲಾಭ ಪಡೆದುಕೊಳ್ಳಬಹುದು ಎಂಬುದು ಆಕಾಶ್ ಚೋಪ್ರಾ ಅವರ ಅಭಿಮತವಾಗಿದೆ.
ಅದೇ ರೀತಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಹೆಚ್ಚಿನ ಅನುಕುಲವಾಗಬಹುದು. ಕಿಂಗ್ಸ್ ತಂಡದಲ್ಲಿ ಗ್ಲೇನ್ ಮ್ಯಾಕ್‍ವೆಲ್‍ಗೆ ಇಲ್ಲಿ ಹೆಚ್ಚು ಪಂದ್ಯಗಳನ್ನು ಆಡಿರುವಂತಹ ಅನುಭವ ಇದೆ. ಅದೇ ರೀತಿ ಸ್ಪಿನ್ನರ್‍ಗಳಾದ ರವಿಚಂದ್ರನ್ ಅಶ್ವಿನ್, ಅಮಿತ್ ಮಿಶ್ರಾ, ಸಂದೀಪ್, ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಮ್ಯಾಜಿಕ್ ಮಾಡುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಐಪಿಎಲ್ ಟೂರ್ನಿಯ ದಿನ ಪ್ರಕಟವಾಗುತ್ತಿದ್ದಂತೆ ತಂಡಗಳ ಬಲಾಬಲದ ಬಗ್ಗೆ ಚರ್ಚೆ ನಡೆಯುತ್ತಿದೆ. ಸೆಪ್ಟಂಬರ್ 19ರಿಂದ ನವೆಂಬರ್ 8ರವರೆಗೆ ಈ ಬಾರಿಯ ಐಪಿಎಲ್ ಟೂರ್ನಿ ನಡೆಯಲಿದೆ. ಆಗಸ್ಟ್ 20ರಂದು ಐಪಿಎಲ್ ತಂಡಗಳು ಯುಎಇಗೆ ಪ್ರಯಾಣ ಬೆಳೆಸಲಿವೆ. ಯಾವುದಕ್ಕೂ ಬಿಸಿಸಿಐ ಈಗ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಇನ್ನೊಂದು ವಾರದಲ್ಲಿ ಐಪಿಎಲ್ ಚಿತ್ರಣ ಸ್ಪಷ್ಟವಾಗಿ ಸಿಗಲಿದೆ.








