ಬೆಂಗಳೂರು: ಹಿರಿಯ ನಟಿ ಸುಧಾರಾಣಿ ಅವರ ಅಣ್ಣನ ಮಗಳಿಗೆ ಚಿಕಿತ್ಸೆ ಕೊಡಲು ನಿರಾಕರಿಸಿದ ಬೆಂಗಳೂರಿನ ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಎಚ್ಚರಿಸಿದ್ದಾರೆ.
ಬೆಡ್ ಇದ್ದರೂ ಇಲ್ಲವೆಂದು, ವೆಂಟಿಲೇಟರ್ ಇಲ್ಲ ಎಂದು ನೆಪಹೇಳಿ ರೋಗಿಯನ್ನು ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಒಂದು ಗಂಟೆಗೂ ಹೆಚ್ಚು ಕಾಲ ಸತಾಯಿಸಿದ್ದರು.

ಚಿಕಿತ್ಸೆ ನೀಡಲು ತಡ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ನೋಡಿದ್ದೇನೆ. ಸುಧಾರಣಿ ಅಷ್ಟೇ ಅಲ್ಲ, ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆ ಸಿಗದೆ ಪರದಾಡಬಾರದು. ಆ ಖಾಸಗಿ ಆಸ್ಪತ್ರೆಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಟ್ವಿಟರ್‍ನಲ್ಲಿ ಸುಧಾರಾಣಿ ಪರದಾಡಿದ ವಿಡಿಯೋ ಟ್ಯಾಗ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಘಟನೆ ಹಿನ್ನೆಲೆ..
ಸುಧಾರಣಿ ಅವರ ಸಹೋದರ ಮಗಳಿಗೆ ಕಿಡ್ನಿ ಸ್ಟೋನ್ ತೊಂದರೆಯಿಂದ ಬಳಲುತ್ತಿದ್ದರು. ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲು ತಡರಾತ್ರಿ ಪರದಾಡಿದ್ದಾರೆ. ನಗರದ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಅಣ್ಣನ ಮಗಳನ್ನು ಕರೆತಂದ ಸುಧಾರಾಣಿ ಅವರಿಗೆ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.
ರೋಗಿಯ ಸಮಸ್ಯೆ ಏನು ಎಂದು ನೋಡಲು ಬಾರದ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ, ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂಬ ನೆಪಹೇಳಿ ಆಸ್ಪತ್ರೆಯ ಒಳಗೂ ಪ್ರವೇಶ ನೀಡದೆ ತಡೆದಿದ್ದಾರೆ.
ಆಸ್ಪತ್ರೆಗೆ ದಾಖಲಿಸಲು ಸುಧಾರಾಣಿ ಪರಿಪರಿಯಾಗಿ ಬೇಡಿಕೊಂಡರೂ ಯಾರೂ ಸ್ಪಂದಿಸಲೇ ಇಲ್ಲ. ಬೇರೆ ದಾರಿ ಇಲ್ಲದೆ ಸುಧಾರಾಣಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್‍ಗೆ ದೂರವಾಣಿ ಮೂಲಕ ಕರೆ ಮಾಡಿ ತಮ್ಮ ಅಳಲು ತೊಡಿಕೊಂಡಿದ್ದಾರೆ. ಪೊಲೀಸ್ ಆಯುಕ್ತರಿಗೆ ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಚಿಕಿತ್ಸೆಗೆ ದಾಖಲು ಮಾಡಿಕೊಂಡರು ಎಂದು ಸುಧಾರಾಣಿ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಡ್ನಿ ಸ್ಟೋನ್‍ನಿಂದ ಬಳಲುತ್ತಿದ್ದ ನಮ್ಮ ಅಣ್ಣನ ಮಗಳನ್ನು ಸೌಜನ್ಯಕ್ಕೂ ಚೆಕ್ ಮಾಡದೆ ವೆಂಟಿಲೇಟರ್ ಮತ್ತು ಬೆಡ್ ಗಳಿಲ್ಲ ಎಂದು ಗಂಟೆಗಳ ಕಾಲ ಆಸ್ಪತ್ರೆ ಮುಂಭಾಗ ನಿಲ್ಲಿಸಿದ್ದಾರೆ. ಪ್ರಥಮ ಚಿಕಿತ್ಸೆಯಾದರೂ ನೀಡಿ ಎಂದರೂ ವೆಂಟಿಲೇಟರ್ ಇಲ್ಲ, ಬೆಡ್ ಇಲ್ಲ ಎಂಬುದನ್ನೇ ಹೇಳುತ್ತಾರೆ. ವೈದ್ಯರೇ ಹೀಗೆ ಮಾಡಿದರೆ ಸಾಮಾನ್ಯ ಜನರಿಗೆ ಯಾವ ಸ್ಥಿತಿ ಬರುತ್ತದೆ ಎಂದು ಸುಧಾರಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.








