ನವದೆಹಲಿ: ಸೋಷಿಯಲ್ ಮೀಡಿಯಾಗಳಲ್ಲಿಂದ ದೂರ ಉಳಿಯುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸುತ್ತಿದ್ದು, ಈ ಕುರಿತು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ‘ದ್ವೇಷವನ್ನು ಬಿಡಿ, ಸಾಮಾಜಿಕ ಮಾಧ್ಯಮ ಖಾತೆಗಳನ್ನಲ್ಲ’ ಎಂದು ಮೋದಿಯ ಟ್ವೀಟ್ ಉಲ್ಲೇಖಿಸಿದ್ದಾರೆ.
ಇತ್ತ ಮೋದಿ ಟ್ವೀಟ್‌ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ‘ಪ್ರಧಾನಿಯವರ ಈ ಹಠಾತ್ ಘೋಷಣೆಯು ದೇಶದಾದ್ಯಂತ ಸಾಮಾಜಿಕ ಮಾಧ್ಯಮ ಸೇವೆಯನ್ನು ನಿಷೇಧಿಸುವುದಕ್ಕಿರುವ ಮುನ್ನುಡಿಯೇ ಎಂದು ಹಲವರು ಚಿಂತಿತರಾಗಿದ್ದಾರೆ. ಪ್ರಧಾನಿ ಮೋದಿಯವರೇ ತಿಳಿದಿರುವಂತೆ ಸಾಮಾಜಿಕ ಮಾಧ್ಯಮವು ಒಳ್ಳೆಯ, ಸಕಾರಾತ್ಮಕ ಮತ್ತು ಉಪಯುಕ್ತ ಸಂದೇಶಗಳ ಕಳುಹಿಸುವಿಕೆಯ ಶಕ್ತಿಯೂ ಹೌದು. ಇದು ದ್ವೇಷವನ್ನು ಹರಡುವುದಕ್ಕೇ ಆಗಬೇಕಿಲ್ಲ’ ಎಂದು ಉಲ್ಲೇಖಿಸಿದ್ದಾರೆ.









