ಏನಿದು ಮತ್ತೊಂದು ಚೀನಿ ವೈರಸ್ ಟಿಕ್ – ವೈರಸ್? ಇದರ ರೋಗಲಕ್ಷಣಗಳೇನು?
ನಮಗೆ ತಿಳಿದಿರುವಂತೆ ಇಡೀ ಪ್ರಪಂಚವು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ. ವಿಶ್ವದಾದ್ಯಂತ ಸುಮಾರು 19 ಮಿಲಿಯನ್ ಜನರಿಗೆ ಸೋಂಕು ತಗುಲಿದೆ ಮತ್ತು ಸುಮಾರು 7,11,271 ಜನರ ಸಾವುನೋವುಗಳಿಗೆ ಕಾರಣವಾಗಿದೆ. ಇದೀಗ ಚೀನಾದಲ್ಲಿ ಹೊಸತೊಂದು ಸಾಂಕ್ರಾಮಿಕ ರೋಗದ ವರದಿಯಾಗಿದ್ದು ಇದು ಟಿಕ್ ಎಂಬ ವೈರಸ್ ನಿಂದ ಹರಡುವ ಸಾಂಕ್ರಾಮಿಕವಾಗಿದ್ದು, ಮನುಷ್ಯರಲ್ಲಿ ಒಬ್ಬರಿಂದೊಬ್ಬರಿಗೆ ಹರಡುತ್ತದೆ ಎಂದು ಚೀನಾದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಟಿಕ್- ವೈರಸ್ ಎಂದರೇನು?
ಸೆವೆರೆ ಫೀವರ್ ವಿದ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್'( Severe fever with thrombocytopenia syndrome) ಅಥವಾ ಎಸ್‌ಎಫ್‌ಟಿಎಸ್ ವೈರಸ್ ಎಂದು ಈ ಸೋಂಕನ್ನು ಗುರುತಿಸಲಾಗಿದ್ದು, ಮನುಷ್ಯರಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು ಎಂದು ಹೇಳಲಾಗಿದೆ. ಚೀನಾದ ಝಿಯಾಂಗ್ಸು ಪ್ರಾಂತ್ಯದಲ್ಲಿ 37 ಮಂದಿ ಮತ್ತು ಪೂರ್ವ ಚೀನಾದ ಅನ್’ಹೂಯಿ ಪ್ರಾಂತ್ಯದಲ್ಲಿ 23 ಜನರು ಈ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ. ಆದರೆ ಇನ್ನೂ ಬಹಳಷ್ಟು ಮಂದಿಗೆ ಈ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ
ಅಷ್ಟಕ್ಕೂ ಎಸ್‌ಎಫ್‌ಟಿಎಸ್ ಚೀನಾದಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದು ಇದು ಮೊದಲ ಬಾರಿಯಲ್ಲ. 2011ರಲ್ಲಿ ಸಹ ಈ ಸೋಂಕು ಚೀನಾದ ವಿವಿಧ ಭಾಗಗಳಲ್ಲಿ ಹರಡಿತ್ತು. ಆದರೆ ಇದೀಗ ಕೊರೊನಾ ಸೋಂಕು ವಿಶ್ವವನ್ನು ವ್ಯಾಪಿಸಿರುವ ಹಿನ್ನೆಲೆಯಲ್ಲಿ, ಈ ಸೋಂಕು ಕಂಡು ಬಂದಿರುವುದು ಆತಂಕಕ್ಕೆ ಎಡೆಮಾಡಿದೆ.
ಟಿಕ್ ಬೈಟ್
ಸಾಮಾನ್ಯವಾಗಿ ಹೊರಾಂಗಣದಲ್ಲಿ ಕಂಡು ಬರುವ, ಹುಲ್ಲು ಮರ, ಪೊದೆಗಳು ಮತ್ತು ಎಲೆಗಳ ರಾಶಿಯಲ್ಲಿ ವಾಸಿಸುವ, ಪ್ರಾಣಿಗಳ ದೇಹಕ್ಕೆ ಅಂಟಿಕೊಳ್ಳುವ ಉಣ್ಣೆ ಗಳಂತಹ ಕೀಟಗಳಿಂದ ಈ ಸೋಂಕು ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಟಿಕ್-ಸೋಂಕು ಅನಾರೋಗ್ಯದ ಲಕ್ಷಣಗಳೇನು?
ಟಿಕ್-ಸಂಬಂಧಿತ ಕಾಯಿಲೆಗಳ ಸಾಮಾನ್ಯ ಲಕ್ಷಣಗಳು:
– ಜ್ವರ ಅಥವಾ ಶೀತ
– ದದ್ದುಗಳು
– ತಲೆನೋವು, ಆಯಾಸ ಮತ್ತು ಸ್ನಾಯು ನೋವುಗಳು
ಈ ಸೋಂಕಿಗೆ ಒಳಗಾದವರು ಕೂಡ ಕೊರೋನಾ ವೈರಸ್ ನ ಗುಣ ಲಕ್ಷಣಗಳನ್ನು ಹೊಂದಿದ್ದರೂ ಟಿಕ್ ನಲ್ಲಿ ಜ್ವರದ ಪ್ರಮಾಣ ಅಧಿಕವಾಗಿರುತ್ತದೆ. ಜ್ವರ, ಕೆಮ್ಮಿನಂತಹ ಲಕ್ಷಣಗಳು ಮೊದಲು ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲ ವೈದ್ಯಕೀಯ ತಪಾಸಣೆಯಲ್ಲಿ ಅವರ ದೇಹದಲ್ಲಿ ಲ್ಯುಕೋಸೈಟ್ ಇರುವುದನ್ನು ವೈದ್ಯರು ಕಂಡುಹಿಡಿದಿದ್ದು, ಪ್ಲೇಟ್‌ಲೆಟ್‌ಗಳು ಕಡಿಮೆಯಾಗಿರುವುದು ವೈದ್ಯರ ಗಮನಕ್ಕೆ ಬಂದಿದೆ.
ಸೋಂಕು ಹೇಗೆ ಹರಡುತ್ತದೆ?
ಝೋಜಿಯಾಂಗ್ ವಿಶ್ವವಿದ್ಯಾಲಯದ ಮೊದಲ ಅಂಗಸಂಸ್ಥೆಯ ಆಸ್ಪತ್ರೆಯ ವೈದ್ಯರಾದ ಶೆಂಗ್ ಜಿಫಾಂಗ್ ಪ್ರಕಾರ, ಇದು ಮಾನವನಿಂದ ಮಾನವನಿಗೆ ಹರಡುತ್ತದೆ ಮತ್ತು ರೋಗಿಗಳ ರಕ್ತ ಅಥವಾ ಲೋಳೆಯ ಮೂಲಕ ಈ ವೈರಸ್ ಇತರರಿಗೆ ಹರಡುತ್ತದೆ.