ಮೈಸೂರು : ಮಹಾಮಳೆಗೆ ಮೈಸೂರಿನ ಕಬಿನಿ ಭರ್ತಿಯಾಗಿದ್ದು, ಜಲಾಶಯದಿಂದ ತಡರಾತ್ರಿ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಕಬಿನಿ, ನುಗು ಜಲಾಶಯಗಳಿಗೆ ಒಳ ಹರಿವು ಹೆಚ್ಚಳವಾಗುತ್ತಿರುವ ಪರಿಣಾಮ ಕಪಿಲಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಕಪಿಲಾ ನದಿ ತೀರದ ಬಡಾವಣೆಗಳಿಗೆ ನೀರು ನುಗ್ಗಿದ್ದು, ನಂಜನಗೂಡಿನ ತೋಪಿನ ಬೀದಿ, ಕುರುಬಗೇರಿ, ಹಳ್ಳದಕೇರಿ ಸಂಪೂರ್ಣ ಜಲಾವೃತವಾಗಿದೆ. ಇನ್ನೂ ಶ್ರೀಕಂಠೇಶ್ವರ ದೇಗುಲದ ಹಿಂಭಾಗದಲ್ಲಿರುವ 200ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿ ಜನರು ಕಂಗಾಲಾಗಿದ್ದಾರೆ. ಇತ್ತ ಅಯ್ಯಪ್ಪ ಸ್ವಾಮಿ, ದತ್ತಾತ್ರೇಯ, ಚಾಮುಂಡೇಶ್ವರಿ ದೇಗುಲವೂ ಮುಳುಗಡೆಯಾಗಿದೆ.
ಬರೊಬ್ಬರಿ 78 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದಾರೆ. ಇನ್ನೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಸಿ ಅಭಿರಾಂ ಜಿ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








