ಬೆಂಗಳೂರು : ಕ್ವಿಟ್ ಇಂಡಿಯಾ ಚಳವಳಿಗೆ ಇಂದಿಗೆ 78 ವರ್ಷಗಳು ತುಂಬಿದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿ ಹೋರಾಟದ ಪ್ರಾಮುಖ್ಯತೆಯನ್ನು ಬಣ್ಣಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಕಂಡ್ರೆ ಟ್ವೀಟ್ ಮಾಡಿ, “ನೆನಪಿರಲಿ ‘ಕ್ವಿಟ್ ಇಂಡಿಯಾ’ ಕೇವಲ ಒಂದು ಆಂದೋಲನವಲ್ಲ ಈ ನೆಲದ ಕ್ರಾಂತಿ. 78 ವರ್ಷಗಳ ಹಿಂದೆ ಮಹಾತ್ಮ ಗಾಂಧಿಜೀ ಅವರ ನೇತೃತ್ವದಲ್ಲಿ ದಾಸ್ಯ ಅನ್ಯಾಯ, ದಬ್ವಾಳಿಕೆ, ಸರ್ವಾಧಿಕಾರದ ವಿರುದ್ಧ ಇಡೀ ದೇಶವೇ ಸೆಟೆದು ನಿಂತಿತ್ತು. ‘ಮಾಡು ಇಲ್ಲವೇ ಮಡಿ’ ವೇದ ಘೋಷ ಈ ನೆಲದ ಎಲ್ಲೆಡೆ ರಣರಣಿಸಿತ್ತು. ಕ್ವಿಟ್ ಇಂಡಿಯಾದ 78 ನೇ ಸ್ಮರಣೋತ್ಸವದ ಸಂದರ್ಭದಲ್ಲಿ ನಾವೆಲ್ಲಾ ಅನ್ಯಾಯ ಅಸತ್ಯ ದಬ್ಬಾಳಿಕೆ ಸರ್ವಾಧಿಕಾರಿ ಧೊರಣೆಯ ವಿರುದ್ದ ಹೋರಾಡಲು ಮತ್ತೆ ಪಣ ತೊಡೋಣ. ದೇಶ, ಪ್ರಜಾಪ್ರಭುತ್ವ ಉಳಿಸೋಣ” ಎಂದು ಬರೆದುಕೊಂಡಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಕೂಡ ಟ್ವೀಟ್ ಮೂಲಕ ಚಳುವಳಿಯನ್ನು ಸ್ಮರಿಸಿದ್ದು, ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಈ ಐತಿಹಾಸಿಕ ದಿನದಂದು ಭಾರತದ ಸ್ವಾತಂತ್ರಕ್ಕಾಗಿ ಶ್ರಮಿಸಿದ, ತ್ಯಾಗ, ಬಲಿದಾನಗೈದ ಎಲ್ಲಾ ಮಹನೀಯರನ್ನ ಗೌರವಪೂರ್ವಕವಾಗಿ ನೆನೆಯುತ್ತೇವೆ ಎಂದಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್, ಬ್ರಿಟೀಷ್ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಪ್ರಾರಂಭವಾದ ‘ಕ್ವಿಟ್ ಇಂಡಿಯಾ ಚಳವಳಿ’ಗೆ ಇಂದು 78 ನೇ ವಸಂತ. ಅಂದು ಆ ಚಳವಳಿಯಲ್ಲಿ ಭಾಗವಹಿಸಿ ಭಾರತಕ್ಕಾಗಿ ತ್ಯಾಗ ಬಲಿದಾನ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.








