ಸದಾ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅಭಿನಯ ಚಕ್ರವರ್ತಿ ಸುದೀಪ ಅವರು ಇದೀಗ ರಾಜ್ಯದ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಸುದೀಪ ಅವರು ಈ ರೀತಿ ಸಮಾಜಮುಖಿ ಕಾರ್ಯಗಳನ್ನ ಮಾಡುತ್ತಿರುವುದು ಇದೇನು ಮೊದಲಲ್ಲ. ಆಗಾಗ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುತ್ತಾರೆ.
ಜನರಷ್ಟೇ ಅಲ್ಲ ಜನಪ್ರತಿನಿಧಿಗಳು ಸಹ ಸುದೀಪ ಅವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಹೌದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಸುಧಾಕರ್ ಅವರು ಟ್ವೀಟ್ ಮೂಲಕ ಸುದೀಪ ಅವರ ಸಮಾಜಮುಖಿ ಕಾರ್ಯದ ಗುಣಗಾನ ಮಾಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸುಧಾಕರ್ ಅವರು “ ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್ ಅವರು ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ ಜೊತೆ ಕೈ ಜೋಡಿಸಿ ಶಿವಮೊಗ್ಗದ 4 ಸ್ಕೂಲ್ ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಅವರ ಕಾರ್ಯ ಅತ್ಯಂತ ಸಂತಸದ ವಿಷಯ. ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಇನ್ನೂ ಸುಧಾಕರ್ ಅವರ ಟ್ವೀಟ್ ಅನ್ನು ಸುದೀಪ ಅವರು ರೀಟ್ವೀಟ್ ಮಾಡುವ ಮೂಲಕ “ ಥಾಂಕ್ಯೂ ಸರ್” ಎಂದು ಪ್ರತಿಕ್ರಿಯಿಸಿದ್ದಾರೆ.
ಸುದೀಪ ಅವರ ಟ್ರಸ್ಟ್ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿಗೆ ಗ್ರಾಮ, ಹಾಳಸಸಿ ಗ್ರಾಮ, ಎಂ.ಎಲ್. ಹಳ್ಳಿ ಹಾಗೂ ಎಸ್. ಎನ್. ನಗರದ ನಾಲ್ಕು ಸರ್ಕಾರಿ ಶಾಲೆಗಳನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ದತ್ತು ಪಡೆದುಕೊಂಡಿದೆ.








