ಭಾರತೀಯ ಕ್ರಿಕೆಟ್ ತಂಡದ ರನ್ ಮಿಷನ್.. ಆಧುನಿಕ ಕ್ರಿಕೆಟ್ ನ ರಕ್ಕಸ.. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಜಗತ್ತಿನ ಡಾನ್ ಎಂದು ಸಾಬೀತು ಮಾಡಿದ್ದಾರೆ.
ಬ್ಯಾಟ್ ಹಿಡಿದು ಮೈದಾನದಲ್ಲಿ ಅತಿ ವೀರ ಭಯಂಕರನಂತೆ ಅಬ್ಬರಿಸಿ ಬೊಬ್ಬರಿಯುವ ವಿರಾಟ್, ಈಗ ಮನೆಯಲ್ಲಿದ್ದೂ ಭಾರಿ ಸದ್ದು ಮಾಡಿದ್ದಾರೆ. ತಾವು ಮನೆಯಲ್ಲಿದ್ದರೂ ತಮ್ಮ ಕ್ರೇಜ್ ಎಂಥಹದ್ದು ಎಂದು ಕೊಹ್ಲಿ ತೋರಿಸಿಕೊಟ್ಟಿದ್ದಾರೆ.
ಇತ್ತೀಚಿಗೆ ನಡೆದ ಸಮೀಕ್ಷೆಯೊಂದರಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಆನ್ ಲೈನ್ ನಲ್ಲಿ ಅತಿ ಹೆಚ್ಚು ಬಾರಿ ಸರ್ಚ್ ಮಾಡಿರುವ ಕುರಿತು, ಮಾಹಿತಿ ಲಭ್ಯವಾಗಿದೆ. ಜನವರಿ 2020ರಿಂದ ಜೂನ್ 2020ರವರೆಗೂ ನಡೆಸಿದ ಸಮೀಕ್ಷೆಯಲ್ಲಿ ಕೊಹ್ಲಿ ಹೆಸರನ್ನ ವಿಶ್ವದಾದ್ಯಂತ ಕ್ರಿಕೆಟ್ ಫ್ಯಾನ್ಸ್ ಅತಿ ಹೆಚ್ಚು ಬಾರಿ ಸರ್ಚ್ ಮಾಡಿದ್ದಾರೆ.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಹೆಸರನ್ನು ಆರು ತಿಂಗಳಿನಲ್ಲಿ ಬರೋಬ್ಬರಿ 16.21 ಲಕ್ಷ ಜನ ಆನ್ ಲೈನ್‌ನಲ್ಲಿ ಸರ್ಚ್ ಮಾಡಿದ್ದಾರೆ. ಇನ್ನುಳಿದಂತೆ ಟೀಂ ಇಂಡಿಯಾ ಏಕದಿನ ತಂಡದ ಉಪನಾಯಕ ರೋಹಿತ್ ಶರ್ಮಾ ಹೆಸರನ್ನ 9.7 ಲಕ್ಷ ಜನ, ಮಹೇಂದ್ರ ಸಿಂಗ್ ಧೋನಿ ಹೆಸರನ್ನ 9.4 ಲಕ್ಷ ಜನ, ಹಾರ್ದಿಕ್ ಪಾಂಡ್ಯ ಹೆಸರನ್ನ 6.7 ಲಕ್ಷ ಜನ, ಸಚಿನ್ ತೆಂಡುಲ್ಕರ್ ಹೆಸರನ್ನ 5.4 ಲಕ್ಷ ಜನ ಆನ್ ಲೈನ್ ನಲ್ಲಿ ಸರ್ಚ್ ಮಾಡಿದ್ದಾರೆ.








