ಅನಿರ್ದಿಷ್ಟಾವಧಿಯವರೆಗೆ ರೈಲು ಸೇವೆ ಸ್ಥಗಿತ. ರೈಲ್ವೆ ಇಲಾಖೆ ವಿಶೇಷ ರೈಲು ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸಾಮಾನ್ಯ ಪ್ರಯಾಣಿಕ ರೈಲು ಸೇವೆಗಳನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಹೊಸದಿಲ್ಲಿ, ಅಗಸ್ಟ್ 12: ಮುಂದಿನ ಸೂಚನೆ ಬರುವವರೆಗೂ ಎಲ್ಲಾ ಸಾಮಾನ್ಯ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಆದರೆ 230 ವಿಶೇಷ ರೈಲು ಸೇವೆ ಮುಂದುವರಿಯಲಿದೆ ಎಂದು ರೈಲ್ವೆ ಇಲಾಖೆ ಹೇಳಿಕೆ ನೀಡಿದೆ.

ಮೊದಲೇ ನಿರ್ಧರಿಸಿದಂತೆ ಮತ್ತು ತಿಳಿಸಿದಂತೆ, ನಿಯಮಿತ ಪ್ರಯಾಣಿಕ ಮತ್ತು ಉಪನಗರ ರೈಲು ಸೇವೆಗಳನ್ನು ಮುಂದಿನ ಸೂಚನೆ ಬರುವವರೆಗೂ ಸ್ಥಗಿತಗೊಳಿಸಲಾಗುವುದು ಎಂದು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲು ಬಯಸುತ್ತೇವೆ. ಪ್ರಸ್ತುತ ಚಾಲನೆಯಲ್ಲಿರುವ 230 ವಿಶೇಷ ರೈಲುಗಳು ಚಾಲನೆಯಲ್ಲಿ ಮುಂದುವರಿಯಲಿವೆ ಎಂದು ರೈಲ್ವೆಯ ಹೇಳಿಕೆ ತಿಳಿಸಿದೆ.
ಮುಂಬೈನ ಸ್ಥಳೀಯ ರೈಲುಗಳು, ಪ್ರಸ್ತುತ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಸೀಮಿತ ಆಧಾರದ ಮೇಲೆ ಓಡುತ್ತಿವೆ, ಇದು ಸಹ ಚಾಲನೆಯಲ್ಲಿರಲಿದೆ ಎಂದು ಅದು ಹೇಳಿದೆ.
ಸ್ಥಳೀಯ ಅಧಿಕಾರಿಗಳಿಂದ ಗುರುತಿಸಲ್ಪಟ್ಟ ಅಗತ್ಯ ಸೇವೆಗಳ ಸಿಬ್ಬಂದಿಯನ್ನು ಕರೆದೊಯ್ಯಲು ಮುಂಬಯಿಯಲ್ಲಿ ಇತ್ತೀಚೆಗೆ ಪ್ರಾರಂಭವಾದ ಸೀಮಿತ ವಿಶೇಷ ಉಪನಗರ ಸೇವೆಗಳೂ ಸಹ ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ರಾಷ್ಟ್ರೀಯ ಸಾರಿಗೆ ಆಗಸ್ಟ್ 12 ರವರೆಗೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿತ್ತು.

ಪ್ರಯಾಣಿಕರ ರೈಲುಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸುವುದರೊಂದಿಗೆ, ಭಾರತೀಯ ರೈಲ್ವೆ ಈ ಹಣಕಾಸು ವರ್ಷದಲ್ಲಿ ತನ್ನ ಪ್ರಯಾಣಿಕರ ವ್ಯವಹಾರದಲ್ಲಿ ಸುಮಾರು 40,000 ಕೋಟಿ ರೂ ನಷ್ಟ ಅನುಭವಿಸಿದೆ.
ಭಾರತದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳು 6,39,929 ರಷ್ಟಿದ್ದರೆ, 15,83,489 ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಂಗಳವಾರ, ಒಂದೇ ದಿನದ 53,601 ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು,
ಭಾರತದಲ್ಲಿ ಇಲ್ಲಿಯವರೆಗೆ 22,68,675 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಸಾವಿನ ಸಂಖ್ಯೆ 45,257 ಕ್ಕೆ ಏರಿದೆ.








