ಕೊಪ್ಪಳ : ಬೆಂಗಳೂರು ಗಲಭೆ ಪೂರ್ವ ಯೋಜಿತ ಕೃತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೈಗಂಬರ್ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ನನ್ನ ವಿರೋಧ ಇದೆ. ಪೋಸ್ಟ್ ಹಾಕಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಪೋಸ್ಟ್ ನೆಪದಲ್ಲಿ ಗಲಭೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಮುಂದುವರಿದು, ಏಕಾಏಕಿ ಜನರು ಹೇಗೆ ಸೇರಿದರು, ಪೆಟ್ರೋಲ್ ಬಾಂಕ್ ಗಳು, ಕಲ್ಲುಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿದ ಕಟೀಲ್, ಈ ಗಲಭೆಯಲ್ಲಿ ಎಸ್ ಡಿಪಿಐ, ಕೆಎಫ್ ಡಿ ಸಂಘಟನೆಯ ಕೈವಾಡ ಇದೆ ಎನ್ನುವ ಮಾತುಗಳಿದ್ದು, ಇವುಗಳನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜೊತೆಗೆ ಇದರ ಹಿಂದೆ ಯಾರ್ಯಾರು ಇದ್ದಾರೆ ತನಿಖೆ ಆಗಬೇಕು. ಬೆಂಗಳೂರು ಗಲಭೆ ಪ್ರಕರಣದಲ್ಲಿ ಸರ್ಕಾರ ದೃಢವಾದ ನಿರ್ಧಾರ ತೆಗೆದುಕೊಂಡಿದ್ದು, ಸರಕಾರಕ್ಕೆ, ಸಿಎಂ, ಗೃಹ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಟೀಲ್ ತಿಳಿಸಿದರು.







