ಬೆಂಗಳೂರು: ಬಿಬಿಎಂಪಿಗೆ ಮಾಲ್‌ಗಳು, ವಾಣಿಜ್ಯ ಉದ್ಯಮಗಳು ಹಾಗೂ ಬೃಹತ್ ಕಟ್ಟಡಗಳ ಮಾಲೀಕರಿಂದ ಬರಬೇಕಾದ ಆಸ್ತಿ ತೆರಿಗೆಯ ಬಾಕಿ ಮೊತ್ತ ಬರೋಬ್ಬರಿ 1,211 ಕೋಟಿ ರೂಪಾಯಿ ಇದೆ. ಮಾಲೀಕರು ಹಲವಾರು ವರ್ಷಗಳಿಂದ ಬಿಬಿಎಂಪಿಗೆ ತೆರಿಗೆ ಪಾವತಿಸಿದೆ ಸತಾಯಿಸುತ್ತಿದ್ದಾರೆ. ಇದೀಗ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಪಾಲಿಕೆ ಚರಾಸ್ತಿ ಜಪ್ತಿಗೆ ಮುಂದಾಗಿದೆ.
ವಲಯವಾರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಮಾಡಿ ನೋಟಿಸ್ ನೀಡಲು ನಿರ್ಧರಿಸಿರುವ ಬಿಬಿಎಂಪಿ ಇದ್ಯಾವುದಕ್ಕೂ ಜಗ್ಗದೇ ಇದ್ದ ಪಕ್ಷದಲ್ಲಿ ಚರಾಸ್ತಿ ಜಪ್ತಿಗೆ ತೀರ್ಮಾನಿಸಿದೆ. ಒಂದು ವರ್ಷಕ್ಕಿಂತ ಹೆಚ್ಚು ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸಿದ್ಧ ಮಾಡಿ ಅವರ ವಿರುದ್ಧ ಕಾರ್ಯಚರಣೆ ಆರಂಭಿಸಿ ಎಂದು ಆಯುಕ್ತರು ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.









