ಕೊರೋನಾ ಹರಡುವ ಮೊದಲೇ ಅಲ್ಪಾವಧಿಯ ಲಾಕ್ ಡೌನ್ ಮಾಡಿ ತಪ್ಪು ಮಾಡಿದ್ದೇವೆ – ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ
ಹೊಸದಿಲ್ಲಿ, ಅಗಸ್ಟ್ 15: ಅಲ್ಪಾವಧಿಯ ಲಾಕ್‌ಡೌನ್ ನಿರ್ಬಂಧದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ತ್ವರಿತ ಕ್ರಮ ಕೈಗೊಳ್ಳದ ಕಾರಣ ಭಾರತದಲ್ಲಿ ಫಲಿತಾಂಶವು ನಿರೀಕ್ಷೆಗಿಂತ ಕೆಟ್ಟದಾಗಿದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್ 25 ರಂದು ಜಾರಿಗೆ ತಂದ ಲಾಕ್ ಡೌನ್ ಆದೇಶವು ವಲಸೆ ಕಾರ್ಮಿಕರ ಬಗ್ಗೆ ಯಾವುದೇ ಡೇಟಾಬೇಸ್ ಇಲ್ಲದಿರುವುದರಿಂದ ವಲಸೆಗಾರರ ಬಿಕ್ಕಟ್ಟನ್ನು ಪರಿಗಣಿಸಿಲ್ಲ ಎಂದು ಬ್ಯಾನರ್ಜಿ ಹೇಳಿದರು. ಸರ್ಕಾರಗಳು ಉತ್ತಮ ಗುಣಮಟ್ಟದ ದತ್ತಾಂಶವನ್ನು ಸೃಷ್ಟಿಮಾಡಲು ಆದ್ಯತೆ ನೀಡಲಿಲ್ಲ. ಇದಕ್ಕೆ ವೈಜ್ಞಾನಿಕವಾಗಿ ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳುವ ಸಂಸ್ಕೃತಿಯ ಕೊರತೆ ಕಾರಣವಾಯಿತು ಎಂದು ಅವರು ಹೇಳಿದರು.
ಲಾಕ್ಡೌನ್ ನಾವು ಬೇಗನೆ ಮಾಡಿದ್ದೇವೆ. ಲಾಕ್‌ಡೌನ್ ಅಲ್ಪಾವಧಿಗೆ ಮಾತ್ರ ಇರುತ್ತದೆ ಎಂದು ನಮಗೆ ತಿಳಿದಿದ್ದರೆ, ಸೋಂಕು ಸಾಕಷ್ಟು ಜನರನ್ನು ತಲುಪಿದಾಗ ನಾವು ಇಂತಹ ಲಾಕ್ ಡೌನ್ ಅನ್ನು ಮಾಡಬಹುದಿತ್ತು . ಅದು ರೋಗದ ಹರಡುವಿಕೆಯನ್ನು ನಿಧಾನಗೊಳಿಸುತ್ತದೆ. ನಾವು ಬೇಗನೆ ಲಾಕ್ ಡೌನ್ ಮಾಡಿ ನಿಧಾನವಾಗಿ ಅನ್ಲಾಕ್ ಮಾಡುತ್ತ ಬಂದಿದ್ದೇವೆ . ಜನರನ್ನು ಬಹಳ ಸಮಯದವರೆಗೆ ಲಾಕ್ ಮಾಡಲು ಸಾಧ್ಯವಿಲ್ಲ. ಆದುದರಿಂದ ಇದು ಕೆಟ್ಟ ಫಲಿತಾಂಶಗಳನ್ನು ಸೃಷ್ಟಿಸಿದೆ ಎಂದು ಬ್ಯಾನರ್ಜಿ ಹೇಳಿದರು.

ದತ್ತಾಂಶಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವ ಅನುಮಾನವಿರುವುದರಿಂದ ಸರ್ಕಾರವು ಉತ್ತಮ ಗುಣಮಟ್ಟದ ದತ್ತಾಂಶವನ್ನು ಉತ್ಪಾದಿಸುವ ಕಾರ್ಯಕ್ಕೆ ಆದ್ಯತೆ ನೀಡಲಿಲ್ಲ ಎಂದು ಅವರು ವೆಬ್‌ನಾರ್‌ನಲ್ಲಿ ಮಾತನಾಡುತ್ತಾ ಹೇಳಿದರು.
ನಮ್ಮಲ್ಲಿ ಸಮಸ್ಯೆ ಏನೆಂದರೆ ವಲಸಿಗರಿಗೆ ವಾಸಿಸಲು ಸ್ಥಳವಿಲ್ಲ. ಅವರು ಯಾವಾಗಲೂ ನಿರ್ಮಾಣ ಸ್ಥಳದಲ್ಲಿ ವಾಸಿಸುತ್ತಾರೆ. ಸೈಟ್ ಮುಚ್ಚಿದಾಗ, ಅವರಿಗೆ ವಾಸಿಸಲು ಸ್ಥಳವಿಲ್ಲ. ಆದುದರಿಂದ ಇನ್ನು ಮುಂದೆ ಈ ರೀತಿಯ ವಿಷಯವನ್ನು ಪರಿಗಣಿಸಿ ವಲಸಿಗರ ದಾಖಲಾತಿಯ ಅಗತ್ಯವಿದೆ ಎಂದು ಬ್ಯಾನರ್ಜಿ ಹೇಳಿದರು.
ನಾವು ಭಾರತದ ಬಗ್ಗೆ ಬಹಳ ಕಡಿಮೆ ಮಾಹಿತಿಗಳು ಹೊರಬರುತ್ತಿರುವ ಸ್ಥಳದಲ್ಲಿದ್ದೇವೆ ಎಂದು ಅವರು ಹೇಳಿದರು.ಹಣಕಾಸು ಸಚಿವಾಲಯದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ಜೂನ್‌ನಲ್ಲಿ ನಡೆಸಿದ ಅವಲೋಕನವನ್ನು ಉಲ್ಲೇಖಿಸಿ, ಹೊಸ ಬದಲಾವಣೆಯಿಂದ 2011-12 ರಿಂದ 2016-17 ವರೆಗಿನ ಈ ಅವಧಿಗೆ ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಸ್ವಲ್ಪ ಜಾಸ್ತಿನೇ ಅಂದಾಜು ಮಾಡಲಾಗಿದೆ ಎಂದರು.








