ಮುಂದಿನ ವರ್ಷ ನನ್ನ ತಂದೆ ಧ್ವಜಾರೋಹಣ ಮಾಡಲಿದ್ದಾರೆ – ಶರ್ಮಿಸ್ತಾ ಮುಖರ್ಜಿ ವಿಶ್ವಾಸ
ಹೊಸದಿಲ್ಲಿ, ಅಗಸ್ಟ್ 15: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಸ್ತಾ ಮುಖರ್ಜಿ ಶನಿವಾರ ಟ್ವಿಟರ್ ನಲ್ಲಿ ತಂದೆಯೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇಲ್ಲಿಯವರೆಗೆ ಸ್ವಾತಂತ್ರ್ಯ ದಿನದಂದು ತನ್ನ ತಂದೆ ಧ್ವಜಾರೋಹಣ ಮಾಡುವುದನ್ನು ತಪ್ಪಿಸಲಿಲ್ಲ ಎಂದು ಅವರು ಹೇಳಿ ಕೊಂಡಿದ್ದಾರೆ.
ಶರ್ಮಿಸ್ತಾ ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಮುಂದಿನ ವರ್ಷ ತ್ರಿವರ್ಣ ಧ್ವಜಾರೋಹಣ ಮಾಡಲು ತನ್ನ ತಂದೆಯ ಆರೋಗ್ಯ ಸುಧಾರಿಸುತ್ತದೆ ಎಂದು ಆಶಿಸಿದ್ದಾರೆ.

ನನ್ನ ತಂದೆ ಮತ್ತು ಚಿಕ್ಕಪ್ಪ ಅವರ ಬಾಲ್ಯದಲ್ಲಿ, ಹಳ್ಳಿಯ ನಮ್ಮ ಪೂರ್ವಜರ ಮನೆಯಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸುತ್ತಿದ್ದರು. ಅಂದಿನಿಂದ, ಅವರು ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜ ಹಾರಿಸುವುದನ್ನು ಒಂದು ವರ್ಷವೂ ತಪ್ಪಿಸಲಿಲ್ಲ. ಮುಂದಿನ ವರ್ಷವೂ ಅವರು ಅದೇ ರೀತಿ ತ್ರಿವರ್ಣ ಧ್ವಜಾರೋಹಣ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಜೈ ಹಿಂದ್, ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಆದರೆ ಸ್ಥಿರವಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಿಂದ ಹೊರಡಿಸಲಾದ ಹೇಳಿಕೆಯ ಪ್ರಕಾರ, ಮುಖರ್ಜಿ ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ ಮತ್ತು ಸೂಕ್ಷ್ಮವಾಗಿ ನಿಗಾ ವಹಿಸುತ್ತಿದ್ದಾರೆ.

ಮಾನ್ಯ ಶ್ರೀ ಪ್ರಣಬ್ ಮುಖರ್ಜಿ ಅವರ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರಿಗೆ ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಸೇನೆ (ಆರ್ & ಆರ್) ಆಸ್ಪತ್ರೆ ಶನಿವಾರ ಬೆಳಿಗ್ಗೆ ಹೇಳಿಕೆಯಲ್ಲಿ ತಿಳಿಸಿದೆ. ಶುಕ್ರವಾರ, ಶರ್ಮಿಸ್ತಾ ತನ್ನ ತಂದೆಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ನಾನು ಅರ್ಥಮಾಡಿಕೊಳ್ಳಬಹುದಾದ ಸಂಗತಿಯೆಂದರೆ, ನನ್ನ ತಂದೆಯ ಸ್ಥಿತಿ ತುಂಬಾ ಗಂಭೀರವಾಗಿದ್ದರೂ, ಅದು ಹದಗೆಟ್ಟಿಲ್ಲ. ಅವರ ದೃಷ್ಟಿ ಬೆಳಕಿಗೆ ಪ್ರತಿಕ್ರಿಯಿಸಿದ ರೀತಿಯಲ್ಲಿ ಸ್ವಲ್ಪ ಸುಧಾರಣೆ ಇದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.








