ಚೀನಾ ಹೆಸರಿಸಲು ಸರ್ಕಾರ ಏಕೆ ಹೆದರುತ್ತಿದೆ? ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ
ಹೊಸದಿಲ್ಲಿ, ಅಗಸ್ಟ್ 16: ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಚೀನಾದ ಹೆಸರನ್ನು ಉಲ್ಲೇಖಿಸದ ಕಾರಣಕ್ಕೆ ಕಾಂಗ್ರೆಸ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿದೆ. ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ಚೀನಾದ ಪಡೆಗಳನ್ನು ಹಿಮ್ಮೆಟ್ಟಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಗಳನ್ನು ಜನರಿಗೆ ತಿಳಿಸುವಂತೆ ಸರ್ಕಾರವನ್ನು ಕೇಳಿದೆ.
ವಿರೋಧ ಪಕ್ಷವು ಸರ್ಕಾರದ ‘ಆತ್ಮನಿರ್ಭರ್ (ಸ್ವಾವಲಂಬಿ)’ ಘೋಷಣೆಯನ್ನು ಟೀಕಿಸಿದೆ. 32 ಸಾರ್ವಜನಿಕ ವಲಯದ ಉದ್ಯಮಗಳನ್ನು ಮಾರಾಟ ಮಾಡಿ, ರೈಲ್ವೆ ಮತ್ತು ವಿಮಾನ ನಿಲ್ದಾಣಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಿದಾಗ ದೇಶದ ಸ್ವಾತಂತ್ರ್ಯವನ್ನು ಹೇಗೆ ಉಳಿಸಿಕೊಳ್ಳುತ್ತದೆ ಎಂದು ಪ್ರಶ್ನಿಸಿದೆ.
ನಮ್ಮ ಸಶಸ್ತ್ರ, ಅರೆಸೈನಿಕ ಮತ್ತು ಪೊಲೀಸ್ ಪಡೆಗಳ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡುತ್ತೇವೆ. ನಾವು 130 ಕೋಟಿ ಭಾರತೀಯರು ಮತ್ತು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಅವರ ಬಗ್ಗೆ ಹೆಮ್ಮೆ ಪಡುತ್ತೇವೆ. ನಮ್ಮ ಮೇಲೆ ದಾಳಿ ನಡೆದಾಗಲೆಲ್ಲಾ ಅವರು ದಾಳಿಕೋರರಿಗೆ ಸೂಕ್ತ ಉತ್ತರ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ಸಮಾರಂಭದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಚೀನಾ ಹೆಸರಿಸಲು ಸರ್ಕಾರ ಏಕೆ ಹೆದರುತ್ತಿದೆ? ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ ಕಾಂಗ್ರೆಸ್ ವಕ್ತಾರ
ನಮ್ಮ ಸರ್ಕಾರ ಚೀನಾದ ಹೆಸರನ್ನು ಹೇಳಲು ಏಕೆ ಹೆದರುತ್ತದೆ ಎಂಬ ಬಗ್ಗೆಯೂ ನಾವು ಯೋಚಿಸಬೇಕು. ಇಂದು, ಚೀನಾ ನಮ್ಮ ಭೂಪ್ರದೇಶವನ್ನು ಆಕ್ರಮಿಸಿಕೊಂಡಾಗ, ಚೀನಾದ ಪಡೆಗಳನ್ನು ಹಿಮ್ಮೆಟ್ಟಿ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಅದು ಹೇಗೆ ಪ್ರಸ್ತಾಪಿಸುತ್ತದೆ ಎಂದು ನಾವು ಸರ್ಕಾರವನ್ನು ಕೇಳಬೇಕು ಎಂದು ಅವರು ಹೇಳಿದರು.
ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಚೀನಾ ಮತ್ತು ಪಾಕಿಸ್ತಾನಕ್ಕೆ ತೀಕ್ಷ್ಣವಾದ ಸಂದೇಶವನ್ನು ನೀಡಿದ್ದಾರೆ. ಉಭಯ ದೇಶಗಳೊಂದಿಗೆ ಗಡಿಯುದ್ದಕ್ಕೂ ನಿಯೋಜಿಸಲಾಗಿರುವ ಸಶಸ್ತ್ರ ಪಡೆಗಳು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಲು ಯತ್ನಿಸಿದವರಿಗೆ ಸೂಕ್ತವಾದ ಉತ್ತರವನ್ನು ನೀಡಿವೆ ಎಂದು ಘೋಷಿಸಿದ್ದಾರೆ. ಆದರೆ, ಅವರು ಉಭಯ ದೇಶಗಳ ಹೆಸರನ್ನು ಹೆಸರಿಸಿಲ್ಲ. ತಮ್ಮ 90 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಅಭಿಯಾನದ ಬಗ್ಗೆ ಮಾತನಾಡಿದ್ದರು.

ಆತ್ಮನಿರ್ಭರ್’ ಬಗ್ಗೆ ಮಾತನಾಡುವವರು, ಅದರ ಅಡಿಪಾಯವನ್ನು ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಹಾಕಿದ್ದಾರೆ ಎಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. 32 ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರಾಟ ಮಾಡಿ, ರೈಲ್ವೆ ಮತ್ತು ವಿಮಾನ ನಿಲ್ದಾಣಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಿದ ಈ ಸರ್ಕಾರವು ಎಲ್ಐಸಿ ಮತ್ತು ಎಫ್ಸಿಐಗಳನ್ನು ಮಾರಾಟ ಮಾಡಲು ಹೊರಟಿದೆ ಎಂದು ಸುರ್ಜೆವಾಲಾ ಟೀಕಿಸಿದರು.








