ಬೆಂಗಳೂರು: ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣ ಹಿನ್ನೆಲೆ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಕೆ.ವಾಜಿದ್ ಪಾಷಾ ಬಂಧನವಾಗಿದೆ. ಬಂಧಿತ ಕೆಲ ದಿನಗಳ ಹಿಂದೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದನು. ಈ ಸಂಬಂಧ ಶಾಸಕರ ಬೆಂಬಲಿಗರು ದೂರು ನೀಡಿದ್ದರು. ನಂತರ ಪೊಲೀಸರು ಇಬ್ಬರ ನಡುವೆ ರಾಜಿ ಮಾಡಿಸಿ ಬುದ್ಧಿ ಹೇಳಿ ಕಳುಹಿಸಿದ್ದರು. ಇನ್ನು ಗಲಭೆ ನಡೆದ ದಿನ ನವೀನ್ ವಿರುದ್ಧ ದೂರು ನೀಡಿದ ಗುಂಪಿನಲ್ಲಿಯೂ ವಾಜಿದ್ ಹಾಜರಾಗಿದ್ದನು ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ನವೀನನ್ನು ಅರೆಸ್ಟ್ ಮಾಡಲು ಪೊಲೀಸರು ಎರಡು ಗಂಟೆ ಕಾಲ ಸಮಯ ಕೇಳುತ್ತಿದ್ದಾರೆ. ಅದ್ರೆ ಎರಡು ಗಂಟೆಗಳ ಕಾಲ ಯಾಕೆ ಬೇಕು ಎಂದು ಪೊಲೀಸರ ವಿರುದ್ಧ ವಾಜಿದ್ ಕೂಗಾಡಿದ್ದನು. ಎಫ್ಐಆರ್ ಇಲ್ಲದೆ ಆರೋಪಿ ಅರೆಸ್ಟ್ ಮಾಡುವುದು ಕಾನೂನು ಬಾಹಿರ. ಈ ಎಲ್ಲಾ ಅಂಶ ಗಮನದಲ್ಲಿಟ್ಟು ಪೊಲೀಸರು ಎರಡು ಗಂಟೆಗಳ ಕಾಲ ಸಮಯ ಕೇಳಿದ್ದರು. ನಮ್ಮನಾಗಿದ್ರೆ ಐದು ಸೆಕೆಂಡ್ ನಲ್ಲಿ ಅರೆಸ್ಟ್ ಮಾಡ್ತಾರೆ ಎಂದು ವಾಜಿದ್ ಕೂಗಾಡಿದ್ದನು. ವಾಜಿದ್ ಅಣತಿಯಂತೆ ಠಾಣೆಗೆ ಆಗಮಿಸಿದ್ದ ಆತನ ಹಿಂಬಾಲಕರು ಪೊಲೀಸ್ ಸ್ಟೇಶನ್ ಧ್ವಂಸ ಮಾಡಿದ್ದರು ಎಂದು ತಿಳಿದು ಬಂದಿದೆ.