ಸಂಗೀತ ಮಾರ್ತಾಂಡ ಜಸ್ರಾಜ್ ಪಂಡಿತ್ ಎನ್ನುವ ಗಂಧರ್ವಗಾಯಕನ ಅಗಲಿಕೆ ಎಂಬ ಬೇಸರದ ನಡುವೆ ಹೇಳಲೇಬೇಕಾದ ಮಾತುಗಳು
ಈ 2020ರ ವರ್ಷ ಅದ್ಯಾಕೆ ಹೀಗೋ ಗೊತ್ತಿಲ್ಲ. ಬರೀ ನೋವು ನೋವು ನೋವು, ಬರೀ ಸಂಕಟಗಳ ಸರಣಿ ಸಾಲು. ಅದೆಷ್ಟೋ ಪ್ರತಿಭಾನ್ವಿತರನ್ನು, ಅದಮ್ಯ ಜೀವನೋತ್ಸಾಹವಿದ್ದ, ಎಷ್ಟೋ ಜನರ ಪಾಲಿನ ಆರಾಧ್ಯ ದೈವವಾಗಿದ್ದ ಅದ್ಭುತವಾದ ಕಲಾವಿದರನ್ನು ಸಾರಾ ಸಗಟಾಗಿ ನುಂಗಿನೀರು ಕುಡಿದ ಕರಾಳ ವರ್ಷವಿದು. ಇದೀಗ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪಾಲಿನ ಧ್ರುವತಾರೆ ಪಂಡಿತ್ ಜಸ್ ರಾಜ್ ಅವರ ಸರದಿ. ಪಂಡಿತ್ ಜಸ್ ರಾಜ್ ನಮ್ಮನ್ನೆಲ್ಲಾ ಅಗಲಿ ಇನ್ನೆಂದೂ ಬಾರದ ಲೋಕಕ್ಕೆ ತೆರಳಿದ್ದಾರೆ. ಅಂತಹ ಮಹಾನ್ ಚೇತನ ನಮ್ಮನ್ನೆಲ್ಲಾ ಅಗಲಿರುವ ಈ ಸಂದರ್ಭದಲ್ಲಿ ಅವರ ಕುರಿತಾದ ಜೀವನ ಚಿತ್ರ ಇಲ್ಲಿದೆ.
ಪಂಡಿತ್ ಜಸ್ ರಾಜ್ ಹುಟ್ಟಿದ್ದು 1930ರ ಜನವರಿ 28ರಂದು. ಹುಟ್ಟಿದ್ದು ಹರಿಯಾಣದ ಹಿಸಾರ್ ಜಿಲ್ಲೆಯ ಪಿಲಿ ಮಾಂಡೋರಿಯಲ್ಲಿ. 80 ವರ್ಷಗಳಿಗೂ ಅಧಿಕ ಕಾಲ ಅಕ್ಷರಶಃ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದ ಮುಕುಟಮಣಿಯಂತೆ ಕಂಗೊಳಿಸಿದ ಜಸ್ ರಾಜ್, ಮೇವಾಟಿ ಘರಾನಾಕ್ಕೆ ಸೇರಿದವರು. ತಮ್ಮ ಪಾಂಡಿತ್ಯವನ್ನು ಭಾರತ ಮಾತ್ರವಲ್ಲದೇ, ಕೆನಡಾ ಮತ್ತು ಅಮೇರಿಕಾಗಳಲ್ಲೂ ಪಸರಿಸಿ ಹೋದಲೆಲ್ಲಾ ಶಿಷ್ಯವೃಂದವನ್ನು ಸಂಪಾದಿಸಿದವರು.
ಪಂಡಿತ್ ಜಸ್ ರಾಜ್ ರ ತಂದೆ ಪಂಡಿತ್ ಮೋತಿರಾಂ ಅವರೂ ಕೂಡ ಶಾಸ್ತ್ರೀಯ ಸಂಗೀತಗಾರರು. ಆದರೆ ಜಸ್ ರಾಜ್ ಹುಟ್ಟಿದ ನಾಲ್ಕೇ ನಾಲ್ಕು ವರ್ಷಕ್ಕೆ ತಂದೆ ಮೋತಿರಾಂ ಮರಣ ಹೊಂದಿದರು. ದುರದೃಷ್ಟವೆಂದರೆ ಅದೇ ದಿನ ಮೀರ್ ಉಸ್ಮಾನ್ ಅಲಿಖಾನ್ ಅವರ ದರ್ಬಾರ್ ನ ಸಂಗೀತಗಾರರಾಗಿ ನೇಮಕಗೊಂಡಿದ್ದರು. ಜಸ್ ರಾಜ್ ರ ಇಡೀ ಕುಟುಂಬವೇ ಸಂಗೀತಕ್ಕಾಗಿ ತಮ್ಮನ್ನು ತಾವು ಮೀಸಲಿಟ್ಟಿದ್ದ ಕುಟುಂಬ.
ತಮ್ಮ ಯೌವ್ವನದ ದಿನಗಳನ್ನು ಜಸ್ ರಾಜ್ ಹೈದ್ರಾಬಾದ್ ನಲ್ಲಿ ಕಳೆದರು. ಮೇವಾಟಿ ಘರಾಣೆಯ ಸಂಗೀತ ಕಲಿಕೆಗಾಗಿ ಗುಜರಾತ್ ನ ಸನಂದ್ ಎಂಬ ಪ್ರದೇಶಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ನಂತರದಲ್ಲಿ ಸನಂದದ ಠಾಕೂರ್ ಸಾಹೇಬರಾಗಿದ್ದ, ಸಂಗೀತಕ್ಕಾಗಿಯೇ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಾರಾಜ ಜಯವಂತ್ ಸಿಂಗ್ ವಘೇಲಾ ಅವರ ಆಸ್ಥಾನದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದರು. ನಂತರದಲ್ಲಿ ಅವರಿಂದಲೇ ಸಂಗೀತದ ತರಬೇತಿಯನ್ನೂ ಪಡೆದರು. ನಂತರ 1946ರಲ್ಲಿ ಜಸ್ ರಾಜ್ ಕೋಲ್ಕತ್ತಾಗೆ ತಮ್ಮ ವಾಸ್ತವ್ಯವನ್ನು ಬದಲಿಸಿದರು. ಇಲ್ಲೇ ಅವರು ರೇಡಿಯೋದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದ್ದು.
1962ರಲ್ಲಿ ಚಲನಚಿತ್ರ ನಿರ್ದೇಶಕರಾಗಿದ್ದ ವಿ.ಶಾಂತಾರಾಮ ಅವರ ಪುತ್ರಿ ಮಧುರಾ ಶಾಂತಾರಾಮ್ ಅವರನ್ನು ವಿವಾಹವಾದರು.
ಮೊದಮೊದಲು ಕೋಲ್ಕತ್ತಾದಲ್ಲೇ ಆರಂಭವಾದ ಜಸ್ ರಾಜ್ ಸಾಂಸಾರಿಕ ಜೀವನ ನಂತರ 1963ರಲ್ಲಿ ಬಾಂಬೆಯಲ್ಲಿ ಮುಂದುವರೆಯಿತು. ಜಸ್ ರಾಜ್ ದಂಪತಿಗಳಿಗೆ ಇಬ್ಬರು ಮಕ್ಕಳು. ಮಗ ದೇವ್ ಪಂಡಿತ್, ಮಗಳು ದುರ್ಗಾ ಜಸ್ ರಾಜ್. 2009ರಲ್ಲಿ ಜಸ್ ರಾಜ್ ರ ಪತ್ನಿ ಮಧುರಾ ಅವರು ಸಂಗೀತ್ ಮಾರ್ತಾಂಡ್ ಪಂಡಿತ್ ಜಸ್ ರಾಜ್ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದರು. ಜಸ್ ರಾಜ್ ಅವರ ಮೊದಲ ಗುರುಗಳು ಅವರ ತಂದೆ ಮೋತಿರಾಂ. ನಂತರ ಅವರ ಸಹೋದರ ಪಂಡಿತ್ ಪ್ರತಾಪ್ ನಾರಾಯಣ್ ಅವರ ಬಳಿ ತಬಲಾವನ್ನೂ ಸಹ ಕಲಿತರು. ಬೇಗಂ ಅಕ್ತರ್ ಅವರ ಒತ್ತಾಯದ ಮೇರೆಗೆ ಜಸ್ರಾಜ್ ಅವರು ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಲು ಆರಂಭಿಸಿದರು.
ತಮ್ಮ 14ನೇ ವಯಸ್ಸಿಗೆ ಗಾಯನಾಭ್ಯಾಸ ಆರಂಭಿಸಿದ ಜಸ್ ರಾಜ್ 22ನೇ ವಯಸ್ಸಿನಲ್ಲಿ ಅಂದರೆ 1952ರಲ್ಲಿ, ತಮ್ಮ ಮೊತ್ತ ಮೊದಲ ಸಂಗೀತ ಪ್ರದರ್ಶನ ನೀಡಿದರು. ಆ ಪ್ರದರ್ಶನವನ್ನು ನೇಪಾಳದ ಕಠ್ಮಂಡುವಿನ ಅಂದಿನ ರಾಜಾ ತ್ರಿಭುವನ್ ಬೀರ್ ಬಿಕ್ರಂ ಶಾ ಅವರು ಏರ್ಪಡಿಸಿದ್ದರು. ಈ ದೊಡ್ಡ ವೇದಿಕೆಯಲ್ಲಿ ಹಾಡುವುದಕ್ಕೂ ಮೊದಲು ಜಸ್ ರಾಜ್ ರೇಡಿಯೋ ಹಾಡುಗಾರರಾಗಿ ಬಹಳಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದರು. ನಂತರ ಮೇವಾಟಿ ಘರಾಣೆಯ ಇನ್ನೊಬ್ಬ ದೊಡ್ಡ ಗುರು ಗುಲಾಮ್ ಖಾದಿರ್ ಖಾನ್ ಅವರ ಬಳಿಯೂ, ಆಗ್ರಾಘರಾಣೆಯ ಸ್ವಾಮಿ ವಲ್ಲಭ ದಾಸ್ ದಾಮುಲ್ಜಿ ಅವರ ಬಳಿಯೂ ಅಭ್ಯಾಸ ಮುಂದುವರೆಸಿದರು.
ಜಸ್ ರಾಜ್ ಜುಗಲ್ ಬಂಧಿ ಶೈಲಿಯಲ್ಲೆ ಜಸ್ರಂಗೀ ಎಂಬ ಕಾದಂಬರಿಯೊಂದನ್ನು ಬರೆದಿದ್ದಾರೆ. ಪುರಾತನ ಕಾಲದಲ್ಲಿ ನಡೆಯುತ್ತಿದ್ದ ಮೂರ್ಛನ ಎಂಬ ಶೈಲಿಯ ಕಚೇರಿಯೇ ಇಲ್ಲಿನ ಕಥಾವಸ್ತು. ಮೂರ್ಛನ ಎಂದರೆ ಒಬ್ಬ ಗಾಯಕ ಮತ್ತು ಗಾಯಕಿ ಇಬ್ಬರೂ ಒಂದೇ ಸಮಯದಲ್ಲಿ ಎರಡು ವಿಭಿನ್ನ ರಾಗಗಳನ್ನು ಪ್ರಸ್ತುತ ಪಡಿಸುವುದು. ಜಸ್ ರಾಜ್ ಅವರು ಹಾಡುವ ಅಹಿರಿತೋಡಿ ಮತ್ತು ಪಟ್ ದೀಪಕಿ ರಾಗಗಳು ಹೆಚ್ಚು ಜನಮನ್ನಣೆ ಗಳಿಸಿವೆ. ಹವೇಲಿ ಸಂಗೀತ್ ನಂತಹ ಅರೆಶಾಸ್ತ್ರೀಯ ಸಂಗೀತ ಶೈಲಿಗೂ ಜಸ್ ರಾಜ್ ಹೆಸರುವಾಸಿಯಾಗಿದ್ದಾರೆ. ಸಿನಿಮಾಗಳಲ್ಲೂ ಶಾಸ್ತ್ರೀಯ ಹಾಗೂ ಸುಗಮ ಸಂಗೀತವಿರುವ ಹಾಡುಗಳನ್ನು ಹಾಡಿದ್ದಾರೆ.
ತಮ್ಮ ತಂದೆಯ ನೆನಪಿಗಾಗಿ ಜಸ್ ರಾಜ್ ಅವರು 1972ರಿಂದ ಪ್ರತೀ ವರ್ಷವೂ ಹೈದ್ರಾಬಾದ್‍ನಲ್ಲಿ ಪಂಡಿತ್ ಮೋತಿರಾಂ ಸಂಗೀತ್ ಸಮಾರೋಹ್ ಎಂಬ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಆಸ್ ರಾಜ್ ಅವರ 87ನೇ ಜನ್ಮದಿನದಂದು ನವದೆಹಲಿಯ ಜವಾಹರ್ ಲಾಲ್ ನೆಹರೂ ಸ್ಟೇಡಿಯಂನಲ್ಲಿ “ಮೈ ಜರ್ನೀ, ಆನ್ ಇಂಟಿಮೇಟ್ ಈವ್ನಿಂಗ್ ವಿತ್ ಪಂಡಿತ್ ಜಸ್ರಾಜ್”ನೆಂಬ ಕಾರ್ಯಕ್ರಮವೊಂದನ್ನು ನವರಸ ಡ್ಯುಂಡೆ ಎಂಬ ನಿರ್ಮಾಣ ಸಂಸ್ಥೆ ಆಯೋಜಿಸಿತ್ತು. ಇದು ಅವರ ಸುದೀರ್ಘ 80 ವರ್ಷಗಳ ಸಂಗೀತ ಸೇವೆಗೆ ಒದಗಿದ ಗೌರವವಾಗಿತ್ತು. ಆ ಕಾರ್ಯಕ್ರಮದ ಕೊನೆಯಲ್ಲಿ ಪಂಡಿತ್ ಜಸ್ರಾಜ್ ಅವರಿಗೆ ಸಭಿಕರೆಲ್ಲರೂ ಎದ್ದುನಿಂತು ಗೌರವ ಸೂಚಿಸಿದ್ದರು. ಸಪ್ತರ್ಷಿ ಚಕ್ರವರ್ತಿ, ಸಂಜೀವ್ ಅಭಯಂಕರ್, ಪಿಟೀಲುವಾದಕಿ ಕಲಾ ರಾಮನಾಥ್, ತೃಪ್ತಿ ಮುಖರ್ಜಿ, ಸುಮನ್ ಘೋಷ್, ಕೊಳಲುವಾದಕ ಶಶಾಂಕ್ ಸುಬ್ರಹ್ಮಣ್ಯಂ, ಅನುರಾಧಾ ಪೋಡ್ವಾಲ್, ಸಾಧನಾ ಸರ್‍ಗಮ್ ಮತ್ತು ರಮೇಶ್ ನಾರಾಯಣ್ ರಂತಹ ಅದೆಷ್ಟೋ ಅದ್ಭುತ ಶಿಷ್ಯವೃಂದವನ್ನು ಪಂಡಿತ್ ಜಸ್ ರಾಜ್ ಹೊಂದಿದ್ದರು. ಅಲ್ಲದೇ ಅಟ್ಲಾಂಟಾ, ಟಾಂಪಾ, ವ್ಯಾಂಕೋವೆರ್, ಟೊರ್ಯಾಂಟೋ, ನ್ಯೂಯಾರ್ಕ್, ನ್ಯೂ ಜೆರ್ಸಿ, ಪಿಟ್ಸ್ ಬರ್ಗ್, ಮುಂಬೈ, ಕೇರಳಾಗಳಲ್ಲಿ ಭಾರತೀಯ ಸಂಗೀತಕ್ಕಾಗಿ ಶಾಲೆಗಳನ್ನು ಸ್ಥಾಪಿಸಿದ ಕೀರ್ತಿ ಜಸ್ ರಾಜ್ ಅವರಿಗೆ ಸಲ್ಲುತ್ತದೆ. ತಮ್ಮ 90ನೇ ವಯಸ್ಸಿನಲ್ಲೂ ಜಸ್ ರಾಜ್ ಅವರು ಸ್ಕೈಪ್ ಮುಖಾಂತರ ಸಂಗೀತ ಪಾಠ ಮಾಡುತ್ತಲೇ ಇದ್ದರು.
ಸಂಗೀತವನ್ನೇ ತನ್ನ ಜೀವನದ ಉಸಿರಾಗಿಸಿಕೊಂಡ ಪಂಡಿತ್ ಜಸ್ ರಾಜ್ ಅವರಿಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಅವುಗಳಲ್ಲಿ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಭಾರತರತ್ನ ಭೀಮಸೇನ ಜೋಷಿ ಕ್ಲಾಸಿಕಲ್ ಮ್ಯೂಸಿಕ್ ಲೈಫ್ ಅಚೀವ್ ಮೆಂಟ್ ಪ್ರಶಸ್ತಿ, ಸಂಗೀತ್ ನಾಟಕ್ ಅಕಾಡೆಮಿ, ಮಾರ್ವಾರ್ ಸಂಗೀತ್ ರತ್ನ ಪ್ರಶಸ್ತಿ, ಗಂಗೂಬಾಯಿ ಹಾನಗಲ್ ಲೈಫ್ ಟೈಮ್ ಅಚೀವ್ ಮೆಂಟ್ ಪ್ರಶಸ್ತಿ, ಸಂಗೀತ ಕಲಾರತ್ನ ಪುರಸ್ಕಾರ ಹೇಳುತ್ತಾ ಹೋದರೆ ಒಂದೇ ಎರಡೇ… ಈ ಎಲ್ಲಾ ಪ್ರಶಸ್ತಿಗಳನ್ನೂ ಮೀರಿ ಬೆಳೆದವರು ಜಸ್ರಾಜ್. ಯಾವುದೇ ಘರಾಣೆಯಾದರೂ ಸರಿ. ಎಲ್ಲರಿಗೂ ಜಸ್ರಾಜ್ ಸದಾ ವಂದನೀಯರು. ಒಬ್ಬ ಅದ್ಭುತ ಗುರುವಾಗಿ, ಸಂಗೀತಗಾರರಾಗಿ ಜಸ್ರಾಜ್ ರ ನೆನಪು ಜನಮಾನಸದಲ್ಲಿ ಸದಾ ಹಚ್ಚಹಸಿರು.
ಇನ್ನು ಮಹಾರಾಷ್ಟ್ರ ಸರ್ಕಾರದ ಬೆಳ್ಳಿಹಬ್ಬದ ಸಂದರ್ಭದಲ್ಲಿ ಪಂಡಿತ್ ಜಸ್ರಾಜ್ ಹಾಗೂ ವಿದ್ವಾನ್ ಬಾಲಮುರುಳಿಕೃಷ್ಣ ಅವರ ಜುಗಲ್ಬಂದಿಯ ಹಂಸಾನಂದಿ ರಾಗದ ಪ್ರಸ್ತುತಿ ನ ಭೂತೋ ನ ಭವಿಷ್ಯತಿ ಎಂಬಂತಿತ್ತು. ಇನ್ನು ತಮ್ಮ ಜೀವಮಾನದುದ್ದಕ್ಕೂ ಸಂಗೀತವನ್ನೇ ಜೀವಿಸಿದ ಜಸ್ರಾಜ್ ಅವನ್ನೆಲ್ಲಾ ಹಸಿರಾಗಿಡಲು ರಾಗ ಸಿಂಫೋನಿ, ಅನುರಾಗ, ದ ಗ್ಲೋರಿ ಆಫ್ ಡಾನ್ – ಮಾರ್ನಿಂಗ್ ರಾಗಾಸ್, ಕಾನ್ಹಾ, ಖಜಾನಾ, ಮಲ್ಹಾರ್- ಎ ಡೌನ್ ಪೋರ್ ಮ್ಯೂಸಿಕ್, ದ ಮೆಡಿಟೇಟಿವ್ ಮ್ಯೂಸಿಕ್ ಆಫ್ ಪಂಡಿತ್ ಜಸ್ ರಾಜ್,ಪರಂಪರಾ- ದ ಮೇವಾಟಿ ಟ್ರೆಡಿಷನ್, ಮುಲ್ತಾನಿ- ಎಂಡ್ ದಿನ್-ಕಿ-ಪುಣ್ಯ್, ಸೋಲ್ ಫುಡ್, ಸೇರಿದಂತೆ ಹಲವಾರು ಸಿಡಿಗಳನ್ನು ಹೊರತಂದಿದ್ದರು.
ಹೀಗೆ ತಮ್ಮ ಇಡೀ ಜೀವನವನ್ನು ಸಂಗೀತಕ್ಕಾಗಿಯೇ ಮುಡಿಪಾಗಿಟ್ಟ, ಸಂಗೀತವನ್ನೇ ಉಸಿರಾಗಿಸಿಕೊಂಡ, ಸಂಗೀತದ ಹೊರತಾದ ಚಿಂತನೆಯನ್ನೇ ನಡೆಸದ ಒಬ್ಬ ಶ್ರೇಷ್ಠ ಋಷಿಯ ಜೀವನ ನಡೆಸಿದ ಜಸ್ರಾಜ್ ಅವರಿಗೆ ಸಂಗೀತದ ರಸಋಷಿ ಎಂದರೆ ಯಾವುದೇ ಅತಿಶಯೋಕ್ತಿ ಅಲ್ಲ. ಆದರೆ ಅದೆಲ್ಲವನ್ನೂ, ತಮ್ಮ ಅಪಾರ ಶಿಷ್ಯವೃಂದವನ್ನೂ, ಅಭಿಮಾನಿವರ್ಗವನ್ನೂ ಒಂದೂ ಮಾತೂ ಹೇಳದೇ ತೊರೆದು ಜಸ್ರಾಜ್, ಇಂದು ಸಂಜೆ 5.15ರ ಸುಮಾರಿಗೆ ನ್ಯೂಜೆರ್ಸಿಯ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅಲ್ಲಿಗೆ ಒಂದು ಸಂಗೀತದ ಮನ್ವಂತರವೇ ಕಳೆದುಹೋದಂತಾಗಿದೆ.
– ಅಂಬಿಕಾ ಸೀತೂರು








