ಪತಿಯನ್ನು ಕ್ಷಮಿಸುವಂತೆ ಶಂಕಿತ ಐಸಿಸ್ ಆಪರೇಟಿವ್ ಅಬು ಯೂಸುಫ್ ಪತ್ನಿಯ ಮನವಿ
ಹೊಸದಿಲ್ಲಿ, ಅಗಸ್ಟ್24: ಶುಕ್ರವಾರ ರಾತ್ರಿ ದೆಹಲಿಯಿಂದ ಬಂಧಿಸಲ್ಪಟ್ಟ ಶಂಕಿತ ಐಸಿಸ್ ಆಪರೇಟಿವ್ ಅಬು ಯೂಸುಫ್ ಪತ್ನಿ, ಪತಿ ಗನ್‌ಪೌಡರ್ ಮತ್ತು ಇತರ ಸ್ಫೋಟಕ ವಸ್ತುಗಳನ್ನು ಉತ್ತರ ಪ್ರದೇಶದ ಬಲರಾಂಪುರದ ತಮ್ಮ ಮನೆಯಲ್ಲಿ ಸಂಗ್ರಹಿಸಿರುವ ಬಗ್ಗೆ ತನಗೆ ಮಾಹಿತಿ ಇತ್ತು ಎಂದು ಹೇಳಿದ್ದಾಳೆ.

ಹಾಗೆ ಮಾಡದಂತೆ ಅವರನ್ನು ನಾನು ಎಚ್ಚರಿಸಿದ್ದೆ ಎಂದು ಆಕೆ ತಿಳಿಸಿದ್ದು ಆದರೆ ಈ ಮಾಹಿತಿಯನ್ನು ಬಹಿರಂಗಪಡಿಸದಂತೆ ಅವರು ಕಟ್ಟುನಿಟ್ಟಾಗಿ ಹೇಳಿದ್ದ ಕಾರಣ ತಾನು ಅಸಹಾಯಕಳಾಗಿದ್ದೆ ಎಂದು ಆಕೆ ಹೇಳಿದ್ದಾಳೆ. ಅಫ್ಘಾನಿಸ್ತಾನದಲ್ಲಿರುವ ಉಗ್ರ ಯೂಸಫ್-ಅಲ್-ಹಿಂದಿ ಸೂಚನೆಯ ಮೇರೆಗೆ ದೆಹಲಿಯ ಜನನಿಬಿಡ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದ ತನ್ನ ಪತಿಯನ್ನು ಕ್ಷಮಿಸಬೇಕೆಂದು ಮಹಿಳೆ ಬಯಸಿದ್ದು, ನನಗೆ ನಾಲ್ಕು ಮಕ್ಕಳಿದ್ದು, ನಾನು ಹೇಗೆ ಬದುಕು ಸಾಗಿಸಲಿ ಎಂದು ಆಕೆ ಕೇಳಿದ್ದಾಳೆ.

36 ವರ್ಷದ ಅಬು ಯೂಸುಫ್ ಖಾನ್ ನ ತಂದೆ ಕಫೀಲ್ ಅಹ್ಮದ್ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡುತ್ತಾ, ನನ್ನ ಮಗ ಯಾರೊಂದಿಗೂ ಜಗಳವಾಡದ ಒಳ್ಳೆಯ ವ್ಯಕ್ತಿಯಾಗಿದ್ದ ಮತ್ತು ಆತ ಭಯೋತ್ಪಾದನೆಗೆ ಇಳಿಯುತ್ತಾನೆ ಎಂದು ಯಾವತ್ತೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.







