ಲಾಕ್ ಡೌನ್ ಆದಾಗಿನಿಂದಲೂ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಕಷ್ಟದಲ್ಲಿರುವವರಿಗೆ ನೆರವಾಗಿ ರಿಯಲ್ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಇದೀಗ ಮತ್ತೊಂದು ಜನಮೆಚ್ಚುವ ಕೆಲಸ ಮಾಡಿದ್ದಾರೆ. ನೋಯ್ಡಾದಲ್ಲಿ 20 ಸಾವಿರ ವಲಸೆ ಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ನೀಡುವುದಾಗಿ ನಟ ಸೋನು ಸೂದ್ ಘೋಷಿಸಿದ್ದಾರೆ. ವಸತಿ ಸೌಲಭ್ಯ ಕಲ್ಪಿಸುವ ಕುರಿತು ಇನ್‌ಸ್ಟಾಗ್ರಾಮ್ ಮುಖಾಂತರ ಮಾಹಿತಿ ನೀಡಿರುವ ಸೋನು ಸೂದ್ ಈ ಕಾರ್ಮಿಕರಿಗೆ ಸ್ಥಳೀಯ ಜವಳಿ ಕೈಗಾರಿಕೆಗಳಲ್ಲಿ ಕೆಲಸ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸೋನು ‘ಎನ್‌ಎಇಸಿ ಅಧ್ಯಕ್ಷ ಲಲಿತ್ ತುಕ್ರಾಲ್ ಅವರ ಬೆಂಬಲದೊಂದಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ಕಾರ್ಮಿಕರಿಗೆ ಆರೋಗ್ಯಕರ ವಸತಿ ಸೌಲಭ್ಯವನ್ನೇ ನೀಡಲಾಗುವುದು’ ಎಂದು ಭರವಸೆಯನ್ನು ನೀಡಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಮನೆ ತಲುಪಲು ಸಾರಿಗೆ ವ್ಯವಸ್ಥೆಯ ಸಹಾಯ ಮಾಡಿದ್ದ ಸೂದ್, ಇದೀಗ ಮತ್ತೊಮದು ಸಮಾಜಮುಖಿ ಕೆಲಸ ಮಾಡಿ ಜನಮನ್ನಣೆ ಪಡೆದಿದ್ದಾರೆ.








