ದಿನೇ ದಿನೇ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಮಹಾಮಾರಿ ಜನಸಾಮಾನ್ಯರು, ತಾರೆಯರು, ಜನಪ್ರತಿನಿಧಿಗಳು, ಅಷ್ಟೇ ಯಾಕೆ ಸಿಎಂ, ಮಾಜಿ ರಾಷ್ಟ್ರಪತಿಗಳನ್ನು ಕಾಡಿತ್ತು. ಇದೀಗ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಚಂದ್ರಗುಪ್ತ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಎನ್ ಆರ್ ವಿಭಾಗದ ಎಸಿಪಿ ಶಿವಶಂಕರ್ ಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
ಕೆಲವು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ.ರಿಷ್ಯಂತ್ ಅವರಿಗೂ ಕೊರೊನಾಸೋಂಕು ತಗುಲಿತ್ತು. ರಿಷ್ಯಂತ್ ಅವರಿಗೆ ಸೋಂಕುದೃಢಪಡುವುದಕ್ಕೂ ಕೆಲ ದಿನಗಳ ಹಿಂದೆಯಷ್ಟೆ ಅವರೊಂದಿಗೆ ಕಮಿಷನರ್ ಚಂದ್ರಗುಪ್ತ ಅವರು ಸಭೆ ನಡೆಸಿದ್ದರು. ಹೀಗಾಗಿ ಯಾವುದೇ ಲಕ್ಷಣಗಳು ಇರದಿದ್ದರೂ ತಪಾಸಣೆಗೆ ಒಳಗಾದಾಗ ಸೋಂಕು ದೃಢಪಟ್ಟಿದೆ.









