ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ ಸದ್ಯಕ್ಕೆ ಆರಂಭ ಮಾಡುವುದಿಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, ಅಂತಾರಾಜ್ಯ ಬಸ್ಗಳ ಸಂಚಾರ ಆರಂಭದ ಬಗ್ಗೆ ಅನೇಕ ರಾಜ್ಯಗಳ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದೇವೆ. ಆದರೆ, ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಆರಂಭಿಸುವ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ ಎಂದರು.
ಬಸ್ ಸೇವೆ ಪುನಾರಂಭಿಸುವ ಬಗ್ಗೆ ಆಂಧ್ರದಿಂದ ಒಪ್ಪಿಗೆ ಬಂದಿದೆ. ತೆಲಂಗಾಣ, ಗೋವಾ, ತಮಿಳುನಾಡು ರಾಜ್ಯಗಳಿಂದ ಇನ್ನೂ ಒಪ್ಪಿಗೆ ಬಂದಿಲ್ಲ. ಆಯಾ ರಾಜ್ಯಗಳ ಒಪ್ಪಿಗೆ ಸಿಕ್ಕ ಬಳಿಕವೇ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಲಕ್ಷದ 93 ಸಾವಿರಕ್ಕೆ ತಲುಪಿದ್ದು, 22 ಸಾವಿರದ 465 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 1.68 ಲಕ್ಷ ಸಕ್ರಿಯ ಪ್ರಕರಣಗಳಿದ್ದು, 5 ಲಕ್ಷದ 2490 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಇಂದು ಒಂದೇ ದಿನ 11 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ದಿನದಿಂದ ದಿನಕ್ಕೆ ಈ ಸಂಖ್ಯೆ ಏರಿಕೆಯಾಗುತ್ತಿದೆ.








